Tag: shivamogga

  • ಶಿವಮೊಗ್ಗ: ಜೈಲು ಕೈದಿ ಮೊಬೈಲ್ ಫೋನ್ ನುಂಗಿದ ಘಟನೆ: ಶಸ್ತ್ರಚಿಕಿತ್ಸೆಯಿಂದ ಸಾಧನ ಪತ್ತೆ, ತನಿಖೆ ಆರಂಭ

    ಶಿವಮೊಗ್ಗ, ಜುಲೈ 12, 2025: ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕೈದಿಯೊಬ್ಬ ಆಶ್ಚರ್ಯಕರವಾಗಿ ಮೊಬೈಲ್ ಫೋನ್ ನುಂಗಿದ ಘಟನೆಯೊಂದು ವರದಿಯಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ಬಳಿಕ ಆ ಸಾಧನವನ್ನು ಹೊರತೆಗೆಯಲಾಗಿದೆ.

    ದೌಲತ್ ಯಾನೆ ಗುಂಡ (30) ಎಂದು ಗುರ್ತಿಸಲಾದ ಕೈದಿಯು ಜೂನ್ 24 ರಂದು ಜೈಲಿನ ವೈದ್ಯಕೀಯ ಸಿಬ್ಬಂದಿಯನ್ನು ಸಂಪರ್ಕಿಸಿ, ತಾನು ಕಲ್ಲನ್ನು ನುಂಗಿದ್ದೇನೆ ಮತ್ತು ಅದು ತನ್ನ ಹೊಟ್ಟೆಯಲ್ಲಿ ಸಿಲುಕಿಕೊಂಡಿದೆ ಎಂದು ದೂರಿದ್ದ. ಪ್ರಾಥಮಿಕ ತಪಾಸಣೆಯ ಬಳಿಕ ವೈದ್ಯರು ಅವನನ್ನು ಶಿವಮೊಗ್ಗದ ಮೆಗಾನ್ ಆಸ್ಪತ್ರೆಗೆ ಮತ್ತಷ್ಟು ತನಿಖೆಗಾಗಿ ಕಳುಹಿಸಿದ್ದರು.

    ಆರಂಭಿಕ ಎಕ್ಸ್-ರೇ ಸ್ಕ್ಯಾನ್‌ಗಳು ವಸ್ತುವನ್ನು ಪತ್ತೆ ಮಾಡಲು ವಿಫಲವಾಗಿದ್ದವು. ಆದರೆ, ಎರಡನೇ ಬಾರಿಯ ಚಿತ್ರಣದಲ್ಲಿ ಕೈದಿಯ ಹೊಟ್ಟೆಯಲ್ಲಿ ಅಪರಿಚಿತ ವಸ್ತುವೊಂದು ಇರುವುದು ದೃಢಪಟ್ಟಿತು. ಅಗತ್ಯ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ಬಳಿಕ, ಕೈದಿಯ ಮೇಲೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಈ ವೇಳೆ ವೈದ್ಯರು ಒಂದು ಇಂಚು ಅಗಲ ಮತ್ತು ಮೂರು ಇಂಚು ಉದ್ದದ ಮೊಬೈಲ್ ಫೋನ್ ಇರುವುದನ್ನು ಕಂಡು ದಿಗ್ಭ್ರಮೆಗೊಂಡರು.

    ಹೊರತೆಗೆಯಲಾದ ಮೊಬೈಲ್ ಫೋನ್ ಅನ್ನು ಜುಲೈ 8 ರಂದು ಶಿವಮೊಗ್ಗ ಕೇಂದ್ರ ಕಾರಾಗೃಹದ ಅಧಿಕಾರಿಗಳಿಗೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು.

    ಪ್ರಕರಣವನ್ನು ಮೇಲ್ವಿಚಾರಣೆ ಮಾಡುತ್ತಿರುವ ಮುಖ್ಯ ಅಧೀಕ್ಷಕ ಡಾ. ಪಿ. ರಂಗನಾಥ್ ಈ ಘಟನೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಅವರು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಔಪಚಾರಿಕ ದೂರು ದಾಖಲಿಸಿದ್ದು, ನಿಷೇಧಿತ ಸಾಧನವು ಉನ್ನತ ಭದ್ರತೆಯ ಜೈಲಿಗೆ ಹೇಗೆ ಪ್ರವೇಶಿಸಿತು ಎಂದು ತನಿಖೆಗೆ ಒತ್ತಾಯಿಸಿದ್ದಾರೆ. “ಫೋನ್ ನುಂಗಿದ ಉದ್ದೇಶದ ಬಗ್ಗೆ ಕೈದಿಯು ಮೌನವಾಗಿದ್ದಾನೆ,” ಎಂದು ಡಾ. ರಂಗನಾಥ್ ಹೇಳಿದ್ದಾರೆ.

    ವಿಚಿತ್ರವೆಂದರೆ, ಜೈಲು ಅಧಿಕಾರಿಗಳ ಪ್ರಕಾರ, ಹೊಟ್ಟೆಯೊಳಗೆ ಮೊಬೈಲ್ ಫೋನ್ ಇದ್ದರೂ ದೌಲತ್ ನಿಯಮಿತವಾಗಿ ಆಹಾರ ಸೇವಿಸುತ್ತಿದ್ದನು ಮತ್ತು ಯಾವುದೇ ಗೋಚರ ಕಫದ ಲಕ್ಷಣಗಳನ್ನು ತೋರಿಸಿರಲಿಲ್ಲ.

    ಶಿವಮೊಗ್ಗ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದಿಂದ 10 ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿದ್ದ ದೌಲತ್‌ನನ್ನು ಜೂನ್ 15 ರಂದು ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಲಾಗಿತ್ತು.

    ಈ ಘಟನೆಯು ಜೈಲು ವ್ಯವಸ್ಥೆಯ ಆಂತರಿಕ ಭದ್ರತೆ ಮತ್ತು ಕಣ್ಗಾವಲು ಲೋಪಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

    ಮೊಬೈಲ್ ಫೋನ್‌ನ ಮೂಲವನ್ನು ಕಂಡುಹಿಡಿಯಲು ಮತ್ತು ಜೈಲು ಸಿಬ್ಬಂದಿ ಅಥವಾ ಬಾಹ್ಯ ವ್ಯಕ್ತಿಗಳಿಂದ ಸಂಭವನೀಯ ಭದ್ರತಾ ಉಲ್ಲಂಘನೆಯನ್ನು ಗುರ್ತಿಸಲು ವಿವರವಾದ ತನಿಖೆ ಈಗ ನಡೆಯುತ್ತಿದೆ.

  • ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಭೀಕರ ಅಪಘಾತ: ಶಿವಮೊಗ್ಗದಲ್ಲಿ ಯುವಕ ಸಾವು

    ಶಿವಮೊಗ್ಗ: ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ಸಂದರ್ಭ ಅಪಘಾತವಾಗಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಉಷಾ ನರ್ಸಿಂಗ್‌ ಹೋಂ ಸರ್ಕಲ್‌ ಬಳಿ ರವೀಂದ್ರ ನಗರ ಗಣಪತಿ ದೇವಸ್ಥಾನದ ಮುಂದೆ ಕಳೆದ ರಾತ್ರಿ ಘಟನೆ ಸಂಭವಿಸಿದೆ.

    ವೆಂಕಟೇಶ ನಗರದ ನಿವಾಸಿ ಅಭಿ (21) ಮೃತ ದುರ್ದೈವಿ. ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಯುವಕರು ಬೈಕ್‌ ಜಾಥಾ ನಡೆಸಿದರು. ಈ ಸಂದರ್ಭ ಎರಡು ಬೈಕುಗಳು ಮುಖಾಮುಖಿ ಡಿಕ್ಕಿಯಾಗಿದ್ದು ತೀವ್ರ ಗಾಯಗೊಂಡಿದ್ದ ಅಭಿ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.

    ಅಪಘಾತವಾಗುತ್ತಿದ್ದಂತೆ ಯುವಕರು ಕೂಡಲೆ ನೆರವಿಗೆ ಧಾವಿಸಿದ್ದಾರೆ. ಆದರೆ ಈ ವೇಳೆಗಾಗಲೆ ಅಭಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಜಯನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

  • ಹೊಳೆಹೊನ್ನೂರು ಹೇಮಣ್ಣ ಕೊಲೆ ಆರೋಪಿ ಕಾಲಿಗೆ ಪೊಲೀಸರಿಂದ ಗುಂಡೇಟು

    ಹೊಳೆಹೊನ್ನೂರು: ಹೇಮಣ್ಣ ಕೊಲೆ ಪ್ರಕರಣದ ಆರೋಪಿ ಮಂಜ ಎಂಬಾತನ ಕಾಲಿಗೆ ಹೊಳಲೂರು ಸಮೀಪ ಪೊಲೀಸರು ಗುಂಡು ಹಾರಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಬಂಧಿಸಲು ತೆರಳಿದ್ದ ಪೊಲೀಸರ ಮೇಲೆಯೆ ಈತ ಹಲ್ಲೆಗೆ ಯತ್ನಿಸಿದ್ದ. ಆಗ ಗುಂಡು ಹಾರಿಸಲಾಗಿದೆ.

    ಈ ಕುರಿತು ಮಾಧ್ಯಮಗಳಿಗೆ ವಾಟ್ಸಪ್ ಮೂಲಕ ಮಾಹಿತಿ ನೀಡಿರುವ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ತಲೆಮರೆಸಿಕೊಂಡಿದ್ದ ಮಂಜನ ಕುರಿತು ಖಚಿತ ಮಾಹಿತಿ ಲಭ್ಯವಾಗಿತ್ತು.

    ಹೊಳೆಹೊನ್ನೂರು ಠಾಣೆ ಇನ್ಸ್‌ಪೆಕ್ಟರ್ ಲಕ್ಷ್ಮಿಪತಿ ನೇತೃತ್ವದ ತಂಡ ಆತನನ್ನು ಬಂಧಿಸಲು ತೆರಳಿತ್ತು. ಆಗ ಮಂಜ ಪೊಲೀಸ್ ಸಿಬ್ಬಂದಿ ಪ್ರಕಾಶ್ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ್ದ. ಈ ವೇಳೆ ಆತ್ಮರಕ್ಷಣೆಗಾಗಿ ಇನ್ಸ್‌ಪೆಕ್ಟರ್ ಲಕ್ಷ್ಮಿಪತಿ ಗುಂಡು ಹಾರಿಸಿದ್ದಾರೆ ಎಂದು ತಿಳಿಸಿದ್ದಾರೆ.

    ಈಚೆಗೆ ಹೊಳೆಹೊನ್ನೂರಿನ ಹೊಸಕೊಪ್ಪದ ಪದವಿ ಪೂರ್ವ ಕಾಲೇಜು ರಸ್ತೆಯಲ್ಲಿ ಹೇಮಣ್ಣ ಎಂಬುವವರ ಹತ್ಯೆಯಾಗಿತ್ತು‌. ವಾಕಿಂಗ್‌ಗೆ ತೆರಳಿದ್ದ ಹೇಮಣ್ಣನ ಮೇಲೆ ದಾಳಿ ನಡೆಸಿ, ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಮಂಜ ಪ್ರಮುಖ ಆರೋಪಿಯಾಗಿದ್ದ ಆರೋಪಿಸಲಾಗಿದೆ. 

  • ತಿದ್ದುಪಡಿ ವಿರೋಧಿಸಿ ಬೃಹತ್ ಪ್ರತಿಭಟನೆ, “ವಕ್ಫ್ ಆಸ್ತಿಗೂ ಅಮಿತ್ ಷಾ ಗೂ ಮೋದಿಗೂ ಏನ್ ಸಂಬಂಧ? “

    ಶಿವಮೊಗ್ಗ (ಮೇ.4): ಕಳೆದ 10 ವರ್ಷಗಳಿಂದ ಈ ದೇಶದಲ್ಲಿ ಒಂದು ಧರ್ಮವನ್ನು ಗುರಿಯಾಗಿರಿಸಿ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಮುಸ್ಲಿಂ ಧಾರ್ಮಿಕ ಮುಖಂಡ ಶಾಹುಲ್ ಹಮೀದ್ ಮುಕ್ತಿಯಾರ್ ಆರೋಪಿಸಿದರು.

    ವಕ್ಫ್ ಕಾಯ್ದೆ(ತಿದ್ದುಪಡಿ) 2025 ಅನ್ನು ತಕ್ಷಣ ರದ್ದುಗೊಳಿಸಲು ಆಗ್ರಹಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯಿಂದ ನಗರದ ಸರ್ ಎಂ.ವಿಶ್ವೇಶ್ವರಯ್ಯ ರಸ್ತೆಯಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

    ನಾವೆಲ್ಲಾ ಭಾರತೀಯರೇ. ಈ ಮಣ್ಣಲ್ಲೇ ಹುಟ್ಟಿದವರು. ನಮಗೂ ಈ ದೇಶದಲ್ಲಿ ಸಂವಿಧಾನದ ಪ್ರಕಾರ ಎಲ್ಲಾ ಹಕ್ಕು ಇದೆ. ವಕ್ಪ್ ಕಾಯ್ದೆ ತಿದ್ದುಪಡಿ ನಮ್ಮ ಶರಿಯತ್‌ಗೆ ವಿರುದ್ಧವಾಗಿದೆ. ವಕ್ಫ್ ಆಸ್ತಿ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದಲ್ಲ. ಅದು ಭಗವಂತನಿಗೆ ಸೇರಿದ್ದು ಇದನ್ನು ಎಲ್ಲಾ ಧರ್ಮೀಯರು ಲೂಟಿ ಮಾಡಿದ್ದಾರೆ. ವಕ್ಪ್ ಆಸ್ತಿಯನ್ನು ಯಾರೇ ಒತ್ತುವರಿ ಮಾಡಿದ್ದರೂ ಅದನ್ನು ಹಿಂದಿರುಗಿಸಲೇಬೇಕು. ಮುಸ್ಲಿಮರ ಆಸ್ತಿಗೆ ಬೇರೆ ಯಾರೂ ಕೈಹಾಕಲು ಸಾಧ್ಯವಿಲ್ಲ. ಈಗಿನ ಕಾನೂನಿನಂತೆ 20-30 ವರ್ಷಗಳ ಕಾಲ ಆತ ವಕ್ಪ್ ಆಸ್ತಿ ಬಳಸಿಕೊಂಡಿದ್ದರೆ ಅದು ಅವನಿಗೇ ನೀಡಬೇಕಾಗುತ್ತದೆ ಎಂದಿದೆ ಎಂದರು.

    ಚಿಂತಕ ಸುಧೀರ್ ಕುಮಾರ್ ಮರೊಳ್ಳಿ ಮಾತನಾಡಿ, ಪ್ರಧಾನಿ ಮೋದಿಯುವರು ದೇಶವನ್ನು ಕಟ್ಟುವ ಕೆಲಸ ಮಾಡುತ್ತಿಲ್ಲ, ಕೋಮುಗಳ ನಡುವೆ ಹೊಡೆದಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಜನರ ಭಾವನೆಗಳನ್ನು ನಾಶ ಮಾಡಲಾಗುತ್ತಿದೆ. ವಕ್ಫ್ ಕಾಯ್ದೆ ಜಾರಿಗೆ ತರುವ ಹಿಂದೆ ರಾಜಕೀಯ ಷಂಡ್ಯತ್ರ ಇದೆ. ಈ ವಕ್ಫ್ ಕಾಯಿದೆ ಸಂವಿಧಾನದ ವಿರೋಧಿಯಾಗಿದೆ ಎಂದರು.

    ವಕ್ಫ್ ಆಸ್ತಿ ಯಾರ ವೈಯುಕ್ತಿಕ ಆಸ್ತಿ ಅಲ್ಲ, ಅದು ಪರಮಾತ್ಮನ ಆಸ್ತಿ. ವಕ್ಫ್ ಆಸ್ತಿಗೂ ಅಮಿತ್ ಷಾ ಗೂ ಮೋದಿಗೂ ಏನ್ ಸಂಬಂಧ ಎಂದು ಪ್ರಶ್ನಿಸಿದ ಅವರು, ಮತ ರಾಜಕಾರಣ ಕೈಬಿಡುವಂತೆ ಆಗ್ರಹಿಸಿದರು.

    ಭಾರತದ ಮುಸ್ಲಿಮರ ಧ್ವನಿಯಾಗಿ ವಕ್ಪ್ ತಿದ್ದುಪಡಿ ಕಾಯ್ದೆ ಇಲ್ಲ. ಇದರಿಂದ ವಕ್ಫ್ ಆಸ್ತಿಗಳ ಸ್ವಾಯತ್ತತೆ ಕಸಿದುಕೊಳ್ಳುತ್ತದೆ. ಸಂವಿಧಾನದ ಗ್ಯಾರಂಟಿಗಳನ್ನು ಉಲ್ಲಂಘಿಸುತ್ತದೆ. ಭಾರತದ ಜಾತ್ಯತೀತ ರಚನೆಗೆ ಧಕ್ಕೆ ತರುತ್ತದೆ ಎಂದು ಮುಸ್ಲಿಂ ಮುಖಂಡರು ಆರೋಪಿಸಿದರು.
    ಕೇಂದ್ರ ಹಾಗೂ ರಾಜ್ಯ ವಕ್ಪ್ ಮಂಡಳಿಗಳಿಗೆ ಮುಸ್ಲಿಮೇತರರನ್ನು ಕಡ್ಡಾಯವಾಗಿ ಸೇರಿಸುವುದು ಸಂವಿಧಾನದ ೨೬ನೇ ವಿಧಿಯ ಅನ್ವಯ ಉಲ್ಲಂಘನೆಯಾಗುತ್ತದೆ. ಇದು ಮುಸ್ಲಿಮರಿಗೆ ತಮ್ಮ ಧಾರ್ಮಿಕ ಸಂಸ್ಥೆಗಳನ್ನು ನಿರ್ಮಿಸುವ ಹಕ್ಕನ್ನು ಕಸಿದುಕೊಳ್ಳುತ್ತದೆ. ಹಿಂದೂ, ಸಿಖ್ ಅಥವಾ ಇತರ ಧಾರ್ಮಿಕ ಆಸ್ತಿಗಳಿಗೆ ಇಂತರ ನಿಯಮ ಇಲ್ಲ ಎಂದರು.

    ದಾಖಲೆ ಇಲ್ಲದ ಮಸೀದಿಗಳು, ಖಬರಸ್ಥಾನಗಳು ಮತ್ತು ದರ್ಗಾಗಳಿಗೆ ಅಪಾಯವನ್ನೊಡ್ಡುತ್ತದೆ. ಸರ್ಕಾರದ ಕೈವಶವಾಗಬಹುದು ಎಂಬ ಆತಂಕವನ್ನು ಪ್ರತಿಭಟನಾಕಾರರು ವ್ಯಕ್ತಪಡಿಸಿದರು.
    ವಕ್ಪ್ ಆಸ್ತಿಯ ಮಾಲೀಕತ್ವವನ್ನು ಜಿಲ್ಲಾಧಿಕಾರಿಗಳೇ ನಿರ್ಧರಿಸುವ ಅಧಿಕಾರ ನೀಡುವುದು ನ್ಯಾಯಾಲಯದ ಮೇಲ್ವಿಚಾರಣೆ ಇಲ್ಲದೇ ಸ್ವೇಚ್ಛಾಚಾರ ತೀರ್ಮಾನಕ್ಕೆ ದಾರಿ ಮಾಡುತ್ತದೆ. ಅಲ್ಲದೇ, ಇದು ವಕ್ಫ್ ಮಂಡಳಿಗಳ ಸ್ವಾಯತ್ತತೆಗೆ ಧಕ್ಕೆ ತರುತ್ತದೆ ಎಂದರು.

    ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಮೊಹಮ್ಮದ್ ಇರ್ಫಾನ್ ಖಾನ್, ಏಜಾಜ್ ಪಾಶಾ, ಮುಫ್ತಿ ಸೈಯದ್ ಮುಜೀಬುಲ್ಲಾ, ಮುಫ್ತಿ ಮೊಹಮ್ಮದ್ ಶಫೀವುಲ್ಲಾ ಕಾಸ್ಮಿ, ಶೇಖ್ ಅಲಿ, ಮೌಲಾನಾ ಆಮಿದ್ ಉಮರಿ, ಮೌಲಾನಾ ಅಬ್ದುಲ್ ಜಬ್ಬಾರ್ ಸಾಧಿಕ್, ಅಫ್ತರ್ ಕೋಡಿಬೇಂದ್ರೆ, ಮೌಲಾನಾ ಜಬೀವುಲ್ಲಾ ಸಾಬ್, ಮುಫ್ತಿ ಇಫ್ತಾಬ್ ಸಾಹೇಬ್, ಜಾಮಿಲ್ ಉಮ್ರಿ ಇದ್ದರು.

    ಬೃಹತ್ ಪ್ರತಿಭಟನೆ: ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವತಿಯಿಂದ ಜಿಲ್ಲಾ ವಕ್ಪ್(ಮುಸ್ಲಿಂ ಹಾಸ್ಟೆಲ್ )ಕಛೇರಿಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಪ್ರತಿಭಟನೆ ನಡೆಸಲಾಯಿತು. ಮಹಿಳೆಯರು,ಯುವಕರು, ಪುರುಷರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವಕ್ಫ್ ಬಚಾನೆ ಚಲೇ ಹೈ- ಆವೋ ಹಮಾರೆ ಸಾಥ್ ಚಲೋ, ದಸ್ತೂರ್ ಬಚಾನೆ ನಿಕ್ಲೆ ಹೈ – ಆವೋ ಹಮಾರೆ ಸಾಥ್ ಚಲೋ ಘೋಷಣೆ ಕೂಗಿದರು. ಮೆರವಣಿಗೆಯುದ್ದಕ್ಕೂ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

    ಪೊಲೀಸರು ಹೈಅಲರ್ಟ್: ಮುಸ್ಲಿಮರು ನಗರದಲ್ಲಿ ಭಾರೀ ಪ್ರತಿಭಟನೆಯ ಮೂಲಕ ಮೆರವಣಿಗೆ ನಡೆಸುತ್ತಾರೆ ಎಂಬ ಸುದ್ದಿ ತಿಳಿದ ಕೂಡಲೇ ಪೊಲೀಸರು ಅಲರ್ಟ್ ಆಗಿದ್ದರು. ಪ್ರತಿಭಟನೆ, ಯಾವುದೇ ಕ್ಷಣದಲ್ಲಿ ಏನಾದರೂ ತಿರುವು ತೆಗೆದುಕೊಳ್ಳಬಹುದೆಂಬ ಅನುಮಾನವಿದ್ದುದರಿಂದ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿತ್ತು. ನಗರವಲ್ಲದೇ ಸುತ್ತಮುತ್ತಲ ಜಿಲ್ಲೆಗಳಿಂದಲೂ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಳ್ಳಲಾಗಿತ್ತು. ಪ್ರತಿಭಟನೆ ನಡೆಯುವ ಮುಖ್ಯ ರಸ್ತೆಯಲ್ಲಿ ಭಾರೀ ಭದ್ರತೆ ಹಾಕಿದ್ದು, ಸಂಪರ್ಕ ರಸ್ತೆಗಳನ್ನು ಬಂದ್ ಮಾಡಲಾಗಿತ್ತು.ಎಸ್ಪಿ ಜಿ.ಕೆ. ಮಿಥುನ್ ಕುಮಾರ್ ಮತ್ತು ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಸ್ಥಳದಲ್ಲೇ ಇದ್ದು, ಬಂದೋಬಸ್ತ್ ಮೇಲ್ವಿಚಾರಣೆ ವಹಿಸಿದ್ದರು. ಪ್ರತಿಭಟನೆಯಲ್ಲಿ 5 ಸಾವಿರಕ್ಕೂ ಮುಸ್ಲಿಂ ಸಮುದಾಯದವರು ಭಾಗವಹಿಸಿದ್ದರು.