ಮಣಿಪಾಲ, ಮೇ 19: ಮಣಿಪಾಲದ ಸ್ಕೂಲ್ ಆಫ್ ಕಾಮರ್ಸ್ ಆಂಡ್ ಎಕನಾಮಿಕ್ಸ್ ಅಕಾಡೆಮಿಯ ಬಿಬಿಎ ವಿದ್ಯಾರ್ಥಿಯೊಬ್ರು ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಛತ್ತೀಸ್‌ಗಢ ಮೂಲದ 21 ವರ್ಷದ ವಿದ್ಯಾರ್ಥಿ, ಎಂಐಟಿ ಹಾಸ್ಟೆಲ್‌ನ 10ನೇ ಬ್ಲಾಕ್‌ನ ಕೊಠಡಿ ಸಂಖ್ಯೆ 2228 (ಸಿ)ಯಲ್ಲಿ ವಾಸ್ತವ್ಯ ಹೊಂದಿದ್ದರು. ಮೇ 12, 2025ರ ರಾತ್ರಿ 9:43ಕ್ಕೆ ಬಯೋಮೆಟ್ರಿಕ್ ಪಂಚ್ ಮಾಡಿ ತಮ್ಮ ಕೊಠಡಿಗೆ ತೆರಳಿದ್ದರು.
ಮೇ 18, 2025ರಂದು ವಿದ್ಯಾರ್ಥಿಯ ಪೋಷಕರು ತಮ್ಮ ಮಗ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಅಕಾಡೆಮಿ ಕಚೇರಿಗೆ ತಿಳಿಸಿದ್ದರು. ಇದರಿಂದ ಮೇ 18ರ ಬೆಳಿಗ್ಗೆ 10:45ಕ್ಕೆ ವಾರ್ಡನ್ ಮತ್ತು ಭದ್ರತಾ ಸಿಬ್ಬಂದಿ ಕೊಠಡಿಗೆ ತೆರಳಿ ಬಾಗಿಲು ಬಡಿದಾಗ, ಒಳಗಡೆ ಚಿಲಕ ಹಾಕಿರುವುದು ಕಂಡುಬಂದಿತು. ವಿದ್ಯಾರ್ಥಿಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ, ವಾರ್ಡನ್ ಮತ್ತು ಭದ್ರತಾ ಸಿಬ್ಬಂದಿ ಬಾಗಿಲು ಮುರಿದು ಒಳಗೆ ಪ್ರವೇಶಿಸಿದಾಗ, ವಿದ್ಯಾರ್ಥಿ ಬೆಡ್ ಶೀಟ್‌ನ ಒಂದು ತುದಿಯನ್ನು ಕೊಠಡಿಯ ಲಿಂಟನ್ ಸೆಲ್ಫ್‌ನಲ್ಲಿರಿಸಿದ ಸೂಟ್‌ಕೇಸ್‌ನ ಹಿಡಿಗೆ ಕಟ್ಟಿ, ಇನ್ನೊಂದು ತುದಿಯನ್ನು ಕುತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿತು. ಮೃತದೇಹ ಕೊಳೆತ ಸ್ಥಿತಿಯಲ್ಲಿತ್ತು.
ವಿದ್ಯಾರ್ಥಿ ತಮ್ಮ ಮೊದಲ ವರ್ಷದ ಎರಡನೇ ಸೆಮಿಸ್ಟರ್‌ನಲ್ಲಿ ನಾಲ್ಕು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದರು. ಈ ವಿಷಯದಿಂದ ಮನನೊಂದು, ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 23/2025, ಕಲಂ 194 ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
ಸಹಾಯ ಬೇಕೇ? ಆತ್ಮಹತ್ಯೆ ಪರಿಹಾರಕ್ಕಾಗಿ ಸಹಾಯ ಬೇಕಾದರೆ, ದಯವಿಟ್ಟು ಸಹಾಯವಾಣಿ: 9152987821 (ಸಹಾಯ – ಕರ್ನಾಟಕ) ಅಥವಾ ಸಮರ್ಪಕ ಮಾನಸಿಕ ಆರೋಗ್ಯ ಸೇವೆಯನ್ನು ಸಂಪರ್ಕಿಸಿ.