Tag: SYS

  • ಧರ್ಮಗಳ ಅಂತರ ತೊರೆದು ಸೌಹಾರ್ದತೆ ಸ್ಥಾಪಿಸುವುದು ಅಗತ್ಯ: ಶ್ರೀ ವಸಂತನಾಥ ಗುರೂಜಿ

    ಕುಂದಾಪುರ: ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ನಾನು ಭಾರತೀಯ ಎನ್ನುವ ಧ್ಯೇಯವನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲಾ ಧರ್ಮಗಳೂ ಒಂದೇ ಎಂಬ ಸೌಹಾರ್ದತೆಯನ್ನು ಸಾರುವ ನಿಟ್ಟಿನಲ್ಲಿ ನಾವೆಲ್ಲ ಕೈಜೋಡಿಸಬೇಕಾಗಿದೆ. ಜಾತಿ, ಮತ, ಪಂಥಗಳ ಅಂತರಗಳನ್ನು ತೊರೆದು ಸೌಹಾರ್ದತೆಯೊಂದಿಗೆ ಸಾಗಬೇಕು ಎಂದು ಹಲಗೇರಿ ಜೋಗಿ ಮನೆಯ ಶ್ರೀ ವಸಂತನಾಥ ಗುರೂಜಿ ಹೇಳಿದ್ದಾರೆ.

    ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು ಕರಾವಳಿ ಕರ್ನಾಟಕದಲ್ಲಿ ಕೋಮು ಸೌಹಾರ್ದವನ್ನು ಬಲಪಡಿಸುವ ಉದ್ದೇಶದಿಂದ ಹೃದಯ ಹೃದಯಗಳನ್ನು ಬೆಸೆಯೋಣ ಎಂಬ ಧೈಯವಾಕ್ಯದೊಂದಿಗೆ ಹಮ್ಮಿಕೊಳ್ಳಲಾದ ’ಸೌಹಾರ್ದ ಸಂಚಾರ’ವನ್ನು ಸೋಮವಾರ ಕುಂದಾಪುರದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.

    ಸೌಹಾರ್ದ ಸಂಚಾರಕ್ಕೆ ಚಾಲನೆ ನೀಡಿದ ಕರ್ನಾಟಕ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷ ಮೌಲಾನಾ ಶಾಫಿ ಸಅದಿ ಮಾತನಾಡಿ, ಪವಿತ್ರ ಕುರಾನ್ ಹಿಂಸೆಯನ್ನು ಆರಾಧಿಸುವುದಿಲ್ಲ. ಪೈಗಂಬರ್ ಜೀವನ ಚರಿತ್ರೆ ಯನ್ನು ಸರಿಯಾಗಿ ಅಧ್ಯಯನ ಮಾಡಿದ ಯಾವ ವ್ಯಕ್ತಿಯೂ ಧರ್ಮದ್ವೇಷ ಮಾಡಲು ಸಾಧ್ಯವಿಲ್ಲ. ಜಗತ್ತಿನ ಯಾವ ಧರ್ಮವೂ ಇನ್ನೊಂದು ಧರ್ಮವನ್ನು ಪ್ರೀತಿಸು ಎನ್ನುತ್ತದೆಯೇ ಹೊರತು ದ್ವೇಷಿಸಲು ಉಪದೇಶಿ ಸುವುದಿಲ್ಲ. ಎಲ್ಲಾ ಧರ್ಮದ ಸಾರ ಶಾಂತಿ ಸಾರುವುದೇ ಆಗಿದೆ ಎಂದು ಹೇಳಿದರು.

    “ಪ್ರಸ್ತುತ ಕಾಲಘಟ್ಟದಲ್ಲಿ ಸೌಹಾರ್ದ ಸಂಚಾರ ಆರಂಭಿಸುವ ಸ್ಥಿತಿಗೆ ತಲುಪಿದ್ದು ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಯಬೇಕು. ಕುಂದಾಪುರ ತಾಲೂಕಿನ ಮಂದಿ ನೂರಾರು ವರ್ಷಗಳಿಂದ ಸೌಹಾದರ್ಯುತ ಜೀವನ ನಡೆಸುತ್ತಿದ್ದಾರೆ. ಎಲ್ಲಾ ಧರ್ಮದ ಹಬ್ಬ, ಹರಿದಿನಗಳಲ್ಲಿ, ಆಚರಣೆಗಳಲ್ಲಿ ಜನರು ಪರಸ್ಪರ ಬೆರೆ ಯುತ್ತಿದ್ದಾರೆ. ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಬಂದು ನೆಮ್ಮದಿ ಹಾಳಾಗಿದ್ದರೂ ಕೂಡ ನೈಜ್ಯ ಪರಂಪರೆಗೆ ಯಾವುದೇ ಸಮಸ್ಯೆಯಾಗಿಲ್ಲ” – ಶಶಿಧರ್ ಹೆಮ್ಮಾಡಿ, ಪ್ರಗತಿಪರ ಚಿಂತಕ

    ಧರ್ಮಗುರು ರೆ.ಫಾ.ನೋವೆಲ್ ಬ್ರಹ್ಮಾವರ ಮಾತನಾಡಿ, ಕ್ರೈಸ್ತ ಮೆಷಿನರಿಗಳು ಕರಾವಳಿಯಲ್ಲಿ ಇಂದಿಗೂ ಯಾವುದೇ ಧರ್ಮ ಬೇದ ಮಾಡದೇ ಸಾಮಾಜಿಕ ಸೇವೆ ನೀಡುತ್ತಿದೆ. ಫಾದರ್ ಮುಲ್ಲರ್ ಆಸ್ಪತ್ರೆ, ಬಾಸೆಲ್ ಮಿಷನ್ ಹೆಂಚಿನ ಕಾರ್ಖಾನೆಗಳು, ಶಿಕ್ಷಣ ಸಂಸ್ಥೆಗಳು ಇಂದಿಗೂ ಕೊಡುಗೆಯಾಗಿ ಉಳಿದಿಲ್ಲ, ಅವು ಸಹೋದರತೆ, ನಂಬಿಕೆ, ವಿಶ್ವಾಸಗಳನ್ನು ಗಟ್ಟಿಗೊಳಿಸುವಲ್ಲಿ ತಮ್ಮದೇ ಕೊಡುಗೆ ನೀಡುತ್ತಿವೆ. ಯಾವ ರಾಜಕೀಯ ಪಕ್ಷಗಳು, ನಾಯಕರು ನಮ್ಮನ್ನು ಒಂದುಗೂಡಿಸಬೇಕಿತ್ತೋ ಅವೇ ನಮ್ಮನ್ನು ವಿಭಜಿಸಲು ಹುನ್ನಾರ ನಡೆಸುತ್ತಿರುವುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

    ಕಾರ್ಯಕ್ರಮಕ್ಕೆ ಮುನ್ನ ಕುಂದಾಪುರದ ಮುಖ್ಯ ಪೇಟೆಯಲ್ಲಿ ಶಾಂತಿ ಮೆರವಣಿಗೆ ನಡೆಯಿತು. ಮುಖ್ಯ ಅತಿಥಿಯಾಗಿ ಪತ್ರಕರ್ತ ಶಶಿಧರ ಹೆಮ್ಮಾಡಿ ಮಾತನಾಡಿದರು. ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದ ಅಧ್ಯಕ್ಷ ಬಶೀರ್ ಸಅದಿ ಬೆಂಗಳೂರು ಅಧ್ಯಕ್ಷತೆ ವಹಿಸಿದ್ದರು.

    ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಹನೀಫ್ ಹಾಜಿ, ಸಹಬಾಳ್ವೆ ಕುಂದಾಪುರದ ರಾಮಕೃಷ್ಣ ಹೇರ್ಳೆ, ಸಿಪಿಐಎಂ ಪಕ್ಷದ ಮುಖಂಡರಾದ ಚಂದ್ರಶೇಖರ ದೇವಾಡಿಗ, ಮಹಾಬಲ, ಕುಂದಾಪುರ ಕ್ಯಾಥೋಲಿಕ್ ಸಭಾ ಅಧ್ಯಕ್ಷ ವಿಲ್ಸನ್ ಡಿ ಅಲ್ಮೇಡಾ, ನಗರ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತಾ, ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ, ಕಾಂಗ್ರೆಸ್ ಜಿಲ್ಲಾ ಐಟಿ ಸೆಲ್ ಅಧ್ಯಕ್ಷ ರೋಷನ್ ಶೆಟ್ಟಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಎಸ್ವೈಎಸ್ ಸಂಘಟನೆಯ ಕುಂದಾಪುರ ತಾಲೂಕು ಉಪಾಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು, ವಕ್ಫ್ ಸಲಹಾ ಸಮಿತಿ ಜಿಲ್ಲಾ ಅಧ್ಯಕ್ಷ ಅಬ್ದುಲ್ ಮುತಾಲಿ ವಂಡ್ಸೆ, ನಾವುಂದ ಜುಮ್ಮಾ ಮಸೀದಿ ಖತೀಬರಾದ ಅಬ್ದುಲ್ ಲತೀಫ್ ಫಾಲೆಲಿ, ಕುಂದಾಪುರ ಜುಮ್ಮಾ ಮಸೀದಿ ಅಧ್ಯಕ್ಷ ವಸೀಂ ಬಾಷಾ, ಸಾಮಾಜಿಕ ಕಾರ್ಯಕರ್ತ ಮನ್ಸೂರ್ ಮರವಂತೆ ಉಪಸ್ಥಿತರಿದ್ದರು.

    ಎಸ್‌ವೈಎಸ್ ರಾಜ್ಯ ಸಮಿತಿಯ ಸದಸ್ಯ ಕೆ.ಎಂ.ಇಲಿಯಾಸ್ ಸ್ವಾಗತಿಸಿದರು. ಎಸ್‌ವೈಎಸ್ ಸಮಿತಿಯ ರಾಜ್ಯಾಧ್ಯಕ್ಷ ಬಶಿರ್ ಸಅದಿ ಬೆಂಗಳೂರು ಪ್ರಾಸ್ತಾವಿಕ ವಾಗಿ ಮಾತನಾಡಿದರು. ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಅಬು ಅಹಮ್ಮದ್ ವಂದಿಸಿದರು.

  • ಉಡುಪಿ: ನಗರದಲ್ಲಿ ಸರ್ವಧರ್ಮೀಯರಿಂದ ’ಸೌಹಾರ್ದ ಸಂಚಾರ’; ಐಕ್ಯತೆಯ ಸಂದೇಶ

    ಉಡುಪಿ, ಜುಲೈ 14, 2025: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು ‘ಹೃದಯ ಹೃದಯಗಳನ್ನು ಬೆಸೆಯೋಣ’ ಎಂಬ ಧ್ಯೇಯವಾಕ್ಯದೊಂದಿಗೆ ‘ಸೌಹಾರ್ದ ಸಂಚಾರ’ ಕಾರ್ಯಕ್ರಮವನ್ನು ಸೋಮವಾರ ಉಡುಪಿ ನಗರದಲ್ಲಿ ಆಯೋಜಿಸಿತು. ಈ ಕಾರ್ಯಕ್ರಮ ಉಡುಪಿ ಜಾಮೀಯ ಮಸೀದಿಯಿಂದ ಆರಂಭಗೊಂಡು, ನಗರದ ಪ್ರಮುಖ ರಸ್ತೆಗಳ ಮೂಲಕ ಸಾಗಿ ಉಡುಪಿ ಶೋಕಾ ಮಾತಾ ಇಗರ್ಜಿಯಲ್ಲಿ ಸಮಾಪ್ತಿಗೊಂಡಿತು.

    ನಂತರ ನಡೆದ ಸಭೆಯಲ್ಲಿ ಮಾತನಾಡಿದ ಹೋರಾಟಗಾರ ಕಲ್ಕುಳಿ ವಿಠಲ್ ಹೆಗ್ಡೆ, “ನಮ್ಮ ಧರ್ಮ, ನಂಬಿಕೆಗಳು ಖಾಸಗಿಯೇ ಹೊರತು ಸಾರ್ವಜನಿಕ ಅಲ್ಲ. ಆದರೆ ಇತ್ತೀಚಿಗೆ ಕೆಲವರು ಧರ್ಮವನ್ನು ಆಧಾರವಾಗಿ ಇರಿಸಿ ಅಮಾಯಕರ ಮೇಲೆ ದಾಳಿ ಮಾಡಿ ಕೊಲೆ ಮಾಡುವ ಘಟನೆಗಳು ಈ ಜಿಲ್ಲೆಯಲ್ಲಿ ನಡೆಯುತ್ತಿವೆ. ಈ ನಾಡಿನ ಸಾವಿರಾರು ವರ್ಷಗಳಿಂದ ಎಲ್ಲ ಜಾತಿ ಧರ್ಮದವರು ಸೌಹಾದರ್ತೆಯಿಂದ ಬಾಳಿ ಬದುಕುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರ ಪ್ರಚೋದನೆಗೆ ಜನ ಬಲಿಯಾಗುತ್ತಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.

    “ಇಂದು ಜೈಲುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಳಿದ ಜಾತಿಯ ಯುವಕರು ಇದ್ದಾರೆ. ದುಡಿದು ತಿನ್ನಬೇಕಾದ ಮಕ್ಕಳು ತಂದೆತಾಯಿಗೆ ಆಸರೆಯಾಗಬೇಕಾದವರು ಜೈಲಿನಲ್ಲಿ ಕೊಳೆಯುತ್ತಿರುವುದು ದುರಂತ. ಈ ದುಷ್ಟ ಶಕ್ತಿಗಳನ್ನು ನಾವೆಲ್ಲ ಸೇರಿ ಸೋಲಿಸಬೇಕು. ಸಮಾನತೆ, ಸಂವಿಧಾನ ಮತ್ತು ಜಾತ್ಯತೀತತೆಯ ವಿರುದ್ಧ ಇರುವ ಸಂಘಟನೆಗಳನ್ನು ಒಗ್ಗಟ್ಟಿನಿಂದ ಎದುರಿಸಬೇಕು” ಎಂದು ಕರೆ ನೀಡಿದರು. ಸಾಮಾಜಿಕ ಹೋರಾಟಗಾರ ಅಮೃತ್ ಶೆಣೈ, ಸೌಹಾರ್ದ ಸಂಚಾರ ಸಮಿತಿಯ ಅಧ್ಯಕ್ಷ ಹಂಝತ್ ಹೆಜಮಾಡಿ, ಬೈಂದೂರು ಜೋಗಿಮನೆಯ ಶ್ರೀವಸಂತನಾಥ ಗುರುಜೀ, ಮತ್ತು ಚರ್ಚ್‌ನ ಸಹಾಯಕ ಧರ್ಮಗುರು ರೆ.ಫಾ. ಲಿಯೋ ಪ್ರವೀಣ್ ಡಿಸೋಜಾ ಸಹ ಐಕ್ಯತೆಯ ಸಂದೇಶ ನೀಡಿದರು.

    ಈ ಕಾರ್ಯಕ್ರಮದಲ್ಲಿ ಧರ್ಮಗುರು ಫಾದರ್ ವಿಲಿಯಂ ಮಾರ್ಟಿಸ್, ಎಸ್‌ವೈಎಸ್ ಸಮಿತಿಯ ರಾಜ್ಯಾಧ್ಯಕ್ಷ ಬಶಿರ್ ಸಅದಿ (ಬೆಂಗಳೂರು), ಪ್ರಧಾನ ಕಾರ್ಯದರ್ಶಿ ಮೌಲಾನ ಅಬೂಬಕರ್ ಸಿದ್ದೀಕ್ (ಮೊಂಟಗೊಳಿ), ನ್ಯಾಯವಾದಿ ಹಬೀಬ್, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ವೌಲಾ, ಮತ್ತು ಪ್ರಮುಖರಾದ ಎಂ.ಎ.ಗಫೂರ್, ಡಾ.ಗಣನಾಥ ಎಕ್ಕಾರು, ಪ್ರಶಾಂತ್ ಜತ್ತನ್ನ, ರಮೇಶ್ ಕಾಂಚನ್, ಸುಂದರ್ ಮಾಸ್ಟರ್, ಶ್ಯಾಮರಾಜ್ ಬಿರ್ತಿ, ನಾಗೇಶ್ ಉದ್ಯಾವರ, ಪ್ರಭಾಕರ ಪೂಜಾರಿ, ವಹೀದ್ ಶೇಖ್ (ಉದ್ಯಾವರ), ಸುಭಾನ್ ಹೊನ್ನಾಳ, ಇಸ್ಮಾಯಿಲ್ ಹುಸೇನ್ (ಕಟಪಾಡಿ), ಹನೀಫ್ ಹಾಜಿ (ಅಂಬಾಗಿಲು), ತೌಫಿಕ್ ಹಾಜಿ ಸೇರಿದಂತೆ ಇತರರು ಭಾಗವಹಿಸಿದ್ದರು. ಎಸ್‌ವೈಎಸ್ ರಾಜ್ಯ ಸಂಯೋಜಕ ಅಬ್ದುರ್ರಹ್ಮಾನ್ ರಝ್ವಿ (ಕಲ್ಕಟ್ಟ) ಕಾರ್ಯಕ್ರಮವನ್ನು ನಿರೂಪಿಸಿದರು.

  • ಜುಲೈ14 ರಂದು ಉಡುಪಿಯಲ್ಲಿ ಎಸ್ ವೈ ಎಸ್ ಸೌಹಾರ್ದ ಸಂಚಾರ ಕಾರ್ಯಕ್ರಮ

    ಉಡುಪಿ: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್ ವೈಎಸ್ ) ವತಿಯಿಂದ ಜುಲೈ 14ರಿಂದ 16 ರ ವರೆಗೆ ಹೃದಯ ಹೃದಯಗಳನ್ನು ಬೆಸೆಯೋಣ ಎಂಬ ಘೋಷಣೆಯೊಂದಿಗೆ ಸೌಹಾರ್ದ ಸಂಚಾರ ಕಾರ್ಯಕ್ರಮ ಹಮ್ಮಿಕೊಂಡಿದ್ದು ಜುಲೈ 14 ರಂದು ಉಡುಪಿಗೆ ಸೌಹಾರ್ದ ಸಂದೇಶ ಜಾಥಾ ಆಗಮಿಸಲಿದೆ ಎಂದು ಸಮಿತಿಯ ಜಿಲ್ಲಾ ಸಂಚಾಲಕ ಹಂಝತ್ ಹೆಜಮಾಡಿ ಹೇಳಿದರು.

    ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬುದ್ಧಿವಂತರ ಜಿಲ್ಲೆ ಎಂದು ಹೆಸರುವಾಸಿಯಾದ ಕರಾವಳಿ ಕರ್ನಾಟಕದ ಇತ್ತೀಚಿನ ಬೆಳವಣಿಗೆಗಳು ಶೀರಾ ಆತಂಕಕಾರಿಯಾಗಿದೆ.ಕರಾವಳಿ ಕರ್ನಾಟಕದಲ್ಲಿ ಕೋಮು ವೈಷಮ್ಮವು ತೀವ್ರಗೊಳ್ಳುತ್ತಿದ್ದು ಹಲ್ಲೆ, ಹತ್ಯೆಗಳು ಸಾಮಾನ್ಯವಾಗುತ್ತಿದೆ ಯಾರೂ ಯಾರನ್ನೂ ನಂಬಲಾಗದಂತೆ ಆತಂಕ ಕವಿದಿದೆ. ಕೃಷಿ, ಕೈಗಾರಿಕೆ, ಮೀನುಗಾರಿಕೆ, ಶಿಕ್ಷಣ, ವೈದ್ಯಕೀಯ ಮತ್ತಿತರ ಕ್ಷೇತ್ರಗಳಲ್ಲಿ ಮೇಲೇರುತ್ತಲೇ ಇರುವ ನಾಡು ನಮ್ಮದು ಆದರೆ ಮನುಷ್ಯ ಮನಸ್ಸುಗಳ ನಡುವಿನ ಅಂತರ ಹೆಚ್ಚಾಗುತ್ತಿದೆ. ಜಾತಿ ಮತ ಪಥ ಪಂಥ ಪಕ್ಷ ಪಂಗಡಗಳ ಹೆಸರಿನಲ್ಲಿ ಪರಸ್ಪರ ಮಾಂಸ ಕೀಳುವ, ರಕ್ತ ಹರಿಸುವ, ಒಬ್ಬರನ್ನೊಬ್ಬರು ಕೊಲ್ಲುವ ತನಕ ಮೊರ, ವಿದ್ವೇಷಗಳು ಮಿತಿ ಮೀರಿವೆ. ಇದಕ್ಕೆಲ್ಲ ಇತಿಶ್ರೀ ಹಾಡುವುದು ಇಂದಿನ ತುರ್ತು ಅಗತ್ಯವಾಗಿದೆ. ಜಾತಿ ಮತ ಪಥಗಳು ಭಿನ್ನವಾದರೂ ಎಲ್ಲರನ್ನೂ ಮನುಷ್ಯರನ್ನಾಗಿ ಕಾಣುವ ಹೃದಯವಂತಿಕೆ ಬಹಳ ಮುಖ್ಯ. ಒಬ್ಬರನ್ನೊಬ್ಬರು ಅರಿತು, ಬೆರೆತು ಬದುಕಿದರೆ ಮಾತ್ರ ಸ್ವಸ್ಥ ಜೀವನ ಸಾಧ್ಯ ಈ ಸಂದೇಶವನ್ನು ಸಮಾಜದ ಮುಂದೆ ಪ್ರಬಲವಾಗಿ ಪ್ರತಿಪಾದಿಸುವ ಸಲುವಾಗಿ ‘ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ’ (ಎಸ್ ವೈ ಎಸ್)  ವಿಶಿಷ್ಟ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ.

    ಹೃದಯ ಹೃದಯಗಳನ್ನು ಬೆಸೆಯೋಣ’ ಎಂಬ ಘೋಷಣೆಯೊಂದಿಗೆ ಜುಲೈ 14,15,16 ದಿನಾಂಕಗಳಲ್ಲಿ ಕುಂದಾಪುರದಿಂದ ಸುಳ್ಯ ತನಕ ಸರ್ವ ಮತೀಯರೂ ಜೊತೆಗೂಡಿ ಸಾಗುವ ‘ಕರಾವಳಿಯ ನೆಲದಲ್ಲಿ ಸೌಹಾರ್ದ ಸಂಚಾರ’ ಎಂಬ ಕಾರ್ಯಕ್ರಮವು ಸೌಹಾರ್ದ ಸಂದೇಶವನ್ನು ಸಮಾಜದ ಮುಂದೆ ತೆರೆದಿಡಲಿದೆ. ದಿನಾಂಕ: 14-07-2025 ಸೋಮವಾರ ಬೆಳಿಗೆ 8 ಗಂಟೆಗೆ ಕುಂದಾಪುರ ಅಸ್ವಯ್ಯದ್ ಯೂಸುಫ್ ವಲಿಯುಲ್ಲಾಹಿ ರವರ ದರ್ಗಾ ಝಿಯಾರತ್ ನೊಂದಿಗೆ ಆರಂಭವಾಗುವ ಸೌಹಾರ್ದ ಸಂಚಾರವು ಬೆಳಿಗ್ಗೆ 9 ಗಂಟೆಗೆ ಕುಂದಾಪುರ ದರ್ಗಾದಿಂದ ಶಾಸ್ತ್ರಿ ಸರ್ಕಲ್ ತನಕ ಸೌಹಾರ್ದ ಕಾಲ್ನಡಿಗೆ ಜಾಥಾ ಹಾಗೂ ನಂತರ ಸೌಹಾರ್ದ ಸಂದೇಶ ಕಾರ್ಯಕ್ರಮ ನಡೆಯಲಿದೆ

    ಮಧ್ಯಾಹ್ನ 12 ಗಂಟೆಗೆ ಉಡುಪಿ ಜಾಮಿಯಾ ಮಸೀದಿಯಿಂದ ಮದರ್ ಆಫ್ ಸೋರೋಸ್ ಚರ್ಚ್ ತನಕ ಕಾಲ್ನಡಿಗೆ ಜಾಥಾ ಹಾಗೂ ಸೌಹಾರ್ದ ಸಂದೇಶ ನಡೆಯಲಿದೆ. ಮಧ್ಯಾಹ್ನ 3.30 ಗಂಟೆಗೆ ಕಾರ್ಕಳ ಗ್ಯಾಲಕ್ಸಿ ಹಾಲ್ ನಿಂದ ಬಸ್ಸು ನಿಲ್ದಾಣದವರೆಗೆ ಕಾಲ್ನಡಿಗೆ ಜಾಥಾ ಹಾಗೂ ಸೌಹಾರ್ದ ಸಂದೇಶ ನಡೆಯಲಿದೆ. ಸಂಜೆ 5:30 ಗಂಟೆಗೆ ಕಾಪು ಪೊಲಿವು ಜಾಮಿಯಾ ಮಸೀದಿಯಿಂದ ಕಾಪು ಪೇಟೆ ತನಕ ಸೌಹಾರ್ದ ನಡಿಗೆ ಹಾಗೂ ಸಂದೇಶ ಭಾಷಣ ನಡೆಯಲಿದೆ. ರಾತ್ರಿ 8 ಗಂಟೆಗೆ ಪಡುಬಿದ್ರಿ ಸೌಹಾರ್ದ ಭಾಷಣ ನಡೆಯಲಿದೆ ಎಂದರು.

    ಈ ಸೌಹಾರ್ದ ಸಂಚಾರದಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು, ಕ್ರೈಸ್ತ ಧರ್ಮಗುರುಗಳು ಮುಸ್ಲಿಂ ಧಾರ್ಮಿಕ ವಿದ್ವಾಂಸರು, ಸಾಮಾಜಿಕ ಶೈಕ್ಷಣಿಕ ಹಾಗೂ ಇನ್ನಿತರ ಪ್ರಮುಖ ನಾಯಕರುಗಳು ಭಾಗವಹಿಸಲಿರುವರು.

    ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಉಪಾಧ್ಯಕ್ಷರಾದ ಹಬೀಬ್ ಆಲಿ, ಪ್ರಧಾನ ಕಾರ್ಯದರ್ಶಿ ಎಮ್ ಸಲೀಂ ಪಕೀರ್ಣಕಟ್ಟೆ, ಎಸ್ ವೈ ಎಸ್ ಜಿಲ್ಲಾ ಸಮಿತಿ ಉಪಾಧ್ಯಕ್ಷರಾದ ಹುಸೈನ್ ಸಅದಿ ಹೊಸ್ಮಾರು, ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಹಾರಿಸ್ ಹೆಮ್ಮಾಡಿ, ಸ್ವಾಗತ ಸಮಿತಿ ಸಂಚಾಲಕರಾದ ಇಂತಿಯಾಝ್ ಹೊನ್ನಾಳ, ಕಾರ್ಯದರ್ಶಿ ತೌಫೀಕ್ ಅಂಬಾಗಿಲು ಉಪಸ್ಥಿತರಿದ್ದರು.