ಕೋಟ, ಜೂನ್ 04, 2025:: ಬ್ರಹ್ಮಾವರ ತಾಲೂಕಿನ ಶಿರಿಯಾರ ಗ್ರಾಮದ ಸಾಹೈಬರಕಟ್ಟೆ ರಿಕ್ಷಾ ನಿಲ್ದಾಣದ ಸಮೀಪ ಐಪಿಎಲ್ ಟಿ20 ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಿಸಿದಂತೆ ಅಕ್ರಮ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಮೂವರನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.
ದಿನಾಂಕ 03-06-2025 ರಂದು ರಾತ್ರಿ, ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ರಾಘವೇಂದ್ರ ಸಿ. ಅವರಿಗೆ, ಸಾಹೈಬರಕಟ್ಟೆ ರಿಕ್ಷಾ ನಿಲ್ದಾಣದ ಸಮೀಪ ಕೆಲವು ಯುವಕರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡಗಳ ನಡುವಿನ ಐಪಿಎಲ್ ಟಿ20 ಫೈನಲ್ ಪಂದ್ಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿರುವ ಬಗ್ಗೆ ಮಾಹಿತಿ ದೊರೆತಿತ್ತು.
ಈ ಮಾಹಿತಿಯ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಗಳಾದ ಶಿವರಾಜ್ (1ನೇ ಆರೋಪಿ), ಪ್ರದೀಪ್ (2ನೇ ಆರೋಪಿ), ಮತ್ತು ಚಂದ್ರ ಜನ್ನಾಡಿ (3ನೇ ಆರೋಪಿ) ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಮೊಬೈಲ್ ಫೋನ್‌ಗಳನ್ನು ಬಳಸಿಕೊಂಡು ಆನ್‌ಲೈನ್ ಬೆಟ್ಟಿಂಗ್ ಆಪ್ ಮತ್ತು ವೆಬ್‌ಸೈಟ್ ಮೂಲಕ ಆರ್‌ಸಿಬಿ ಮತ್ತು ಪಿಬಿಕೆಎಸ್ ತಂಡಗಳಿಗೆ ಸಂಬಂಧಿಸಿದಂತೆ ಅಕ್ರಮ ಬೆಟ್ಟಿಂಗ್‌ನಲ್ಲಿ ತೊಡಗಿದ್ದರು.
ಪೊಲೀಸರು ಆರೋಪಿಗಳಿಂದ ಕ್ರಿಕೆಟ್ ಬೆಟ್ಟಿಂಗ್‌ಗೆ ಬಳಸಿದ ಮೂರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಘಟನೆಯ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 110/2025, ಕಲಂ: 112 BNS ಮತ್ತು 78(i)(iii) KP Act ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಚಾಲನೆಯಲ್ಲಿದೆ.