ವಿಜಯಪುರ: ಶರಣರು ಮತ್ತು ಸೂಫಿ ಸಂತರು ನೆಲೆಸಿದ ವಿಜಯಪುರದಲ್ಲಿ ಕೋಮುವಾದ ತಡೆಯಲು ಮುಸ್ಲಿಂ ಬಾಂಧವ್ಯ ವೇದಿಕೆಯು ಲಿಂಗಾಯತ ಸೇರಿದಂತೆ ವಿವಿಧ ಸಮುದಾಯಗಳೊಂದಿಗೆ ಸೌಹಾರ್ದ ಕೂಡ ಏರ್ಪಡಿಸುತ್ತಿದೆ ಎಂದು ವೇದಿಕೆಯ ಸಂಸ್ಥಾಪಕ ಮುಸ್ತಾಕ್ ಹೊನ್ನಾಬೈಲ್ ತಿಳಿಸಿದರು.
ಜಗಜ್ಯೋತಿ ಬಸವೇಶ್ವರರ ಜನ್ಮಭೂಮಿಯಾದ ವಿಜಯಪುರದಲ್ಲಿ, ಬಸವೇಶ್ವರರು ಕೇವಲ ಲಿಂಗಾಯತರ ಜ್ಯೋತಿಯಲ್ಲ, ವಿಶ್ವ ಜ್ಯೋತಿಯಾಗಿದ್ದಾರೆ. ಆದರೆ, ಇಂತಹ ಮಹಾತ್ಮರ ನೆಲದಲ್ಲಿ ಕೆಲವರು ಕೋಮುವಾದ ಹರಡುತ್ತಿದ್ದಾರೆ. ಇತಿಹಾಸದಲ್ಲಿ ಮುಸ್ಲಿಮರು ಮತ್ತು ಲಿಂಗಾಯತರು ಅನ್ಯೋನ್ಯವಾಗಿ ಬದುಕಿದ್ದಾರೆ. ಈ ಸಾಮರಸ್ಯವನ್ನು ಕದಡದಿರಲು ರಾಜ್ಯಾದ್ಯಂತ ಸೌಹಾರ್ದ ಕೂಡ ಆಯೋಜಿಸಲಾಗುತ್ತಿದೆ ಎಂದು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

ರಾಜ್ಯದಲ್ಲಿ ಸುಮಾರು 10 ಲಿಂಗಾಯತ ನಾಯಕರು ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ. ಯಾವುದೇ ಸರ್ಕಾರ ಬಂದರೂ ಸಚಿವ ಸಂಪುಟದಲ್ಲಿ ಲಿಂಗಾಯತ ಸಮುದಾಯಕ್ಕೆ ಸಿಂಹಪಾಲು ದೊರೆಯುತ್ತದೆ. ಈ ಸ್ಥಾನಗಳನ್ನು ಪಡೆಯಲು ಮುಸ್ಲಿಂ ಸಮುದಾಯ ರಾಜಕೀಯವಾಗಿ ನಿರಂತರ ಬೆಂಬಲ ನೀಡಿದೆ. ಆದರೆ, ಲಿಂಗಾಯತ ಸಮುದಾಯ ಮುಸ್ಲಿಮರಿಗೆ ಇದೇ ರೀತಿಯ ಸಹಕಾರ ನೀಡಿಲ್ಲ ಎಂದು ಮುಸ್ತಾಕ್ ಖೇದ ವ್ಯಕ್ತಪಡಿಸಿದರು.
ಕೋಮುವಾದಿ ಪಕ್ಷವನ್ನು ಬೆಂಬಲಿಸುವ ಲಿಂಗಾಯತರನ್ನು ಹೊರತುಪಡಿಸಿ, ಇತರ ಪಕ್ಷಗಳ ಲಿಂಗಾಯತರಿಗೆ ಮುಸ್ಲಿಮರು ನಿರಂತರವಾಗಿ ಮತದಾನ ಮಾಡಿದ್ದಾರೆ. ಆದರೆ, ಮುಸ್ಲಿಮರಿಗೆ ಲಿಂಗಾಯತ ಸಮುದಾಯದಿಂದ ಕನಿಷ್ಠ ಪ್ರಮಾಣದಲ್ಲೂ ರಾಜಕೀಯ ಬೆಂಬಲ ದೊರೆಯುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಮುಸ್ಲಿಮರ 4% ಮೀಸಲಾತಿಯನ್ನು ರದ್ದುಗೊಳಿಸಿದ್ದು ದೇಶದ ರಾಜಕಾರಣದಲ್ಲಿ ವಿಲಕ್ಷಣ ಘಟನೆಯಾಗಿದೆ. ಈ ಹಿನ್ನೆಲೆಯಲ್ಲಿ, ಉಭಯ ಸಮುದಾಯಗಳ ನಡುವೆ ಬಾಂಧವ್ಯ ಗಟ್ಟಿಗೊಳಿಸಲು ಸಮಾಜದ ಮುಖಂಡರು, ಚಿಂತಕರು ಮತ್ತು ಧಾರ್ಮಿಕ ಗುರುಗಳನ್ನು ಭೇಟಿಯಾಗಲಾಗುತ್ತಿದೆ ಎಂದರು.
ಸಮುದಾಯ ಸಮ್ಮಿಲನ ಕಾರ್ಯಕ್ರಮ ಮತ್ತು ಪುಸ್ತಕ ಪ್ರದರ್ಶನ

ಗುಮ್ಮಟ ನಗರಿ ವಿಜಯಪುರದ ಹೋಟೆಲ್ ಮಧುವನ ಇಂಟರ್‌ನ್ಯಾಷನಲ್‌ನ ಸಭಾಂಗಣದಲ್ಲಿ ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕದ ವತಿಯಿಂದ ಸಮುದಾಯ ಸಮ್ಮಿಲನ ಕಾರ್ಯಕ್ರಮ ಮತ್ತು ಪುಸ್ತಕ ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಮುಸ್ಲಿಂ ಲೇಖಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಖ್ಯಾತ ವಿಮರ್ಶಕ ಮತ್ತು ಬಸವತತ್ವ ಪ್ರಚಾರಕ ಡಾ. ಜೆ.ಎಸ್. ಪಾಟೀಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಅವರು, ಭಾರತ ಬಹುಸಂಸ್ಕೃತಿಯ ದೇಶವಾಗಿದ್ದು, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಏಕಸಂಸ್ಕೃತಿಯನ್ನು ಹೇರಲು ಪ್ರಯತ್ನಿಸುತ್ತಿವೆ. ಮುಸ್ಲಿಮರ ಮೀಸಲಾತಿಯನ್ನು ಕಸಿದು ಲಿಂಗಾಯತರಿಗೆ ನೀಡುವ ಹಿಂದಿನ ಸರ್ಕಾರದ ನಿರ್ಧಾರ ನ್ಯಾಯಾಲಯದ ಮೆಟ್ಟಿಲೇರಿದೆ. ಇದು ಅನುಷ್ಠಾನವಾಗದ ಕಾರಣ ಮುಸ್ಲಿಮರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದರು.
ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ನಬಿರಸೂಲ್ ಮಮದಾಪುರ ಕೂಡ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. 1994ರಿಂದ 1998ರವರೆಗೆ ಕುಂದಾಪುರ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದ ಇವರು, ಮೀಸಲಾತಿಯು ಆರ್ಥಿಕತೆಯನ್ನಾಧರಿಸಿದ್ದಲ್ಲ, ಸಾಮಾಜಿಕ ಮತ್ತು ಸಾಂಸ್ಕೃತಿಕ ಆಧಾರದ ಮೇಲೆ ನೀಡಲಾಗಿದೆ. ಈ ಆಧಾರದ ಮೀಸಲಾತಿಯನ್ನು ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಮುಸ್ಲಿಂ ಬಾಂಧವ್ಯ ವೇದಿಕೆಯ ಮೂರನೇ ಪದಗ್ರಹಣ ಸಮಾರಂಭ
ಕಾರ್ಯಕ್ರಮದಲ್ಲಿ ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕದ 2025-26ನೇ ಸಾಲಿನ ಮೂರನೇ ಪದಗ್ರಹಣ ಸಮಾರಂಭ ನಡೆಯಿತು. ಝಾಕಿರ್ ಹುಸೇನ್ ಉಚ್ಚಿಲ ಅಧ್ಯಕ್ಷರಾಗಿ ಮತ್ತು ರಹಮತ್ ದಾವಣಗೆರೆ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದರು. ಗ್ಯಾಲಂಟ್ರಿ ಶೌರ್ಯ ಪದಕ ವಿಜೇತ ಭಾರತೀಯ ಸೇನೆಯ ಬ್ರಿಗೇಡಿಯರ್ ಮುಹಮ್ಮದ್ ಮುಷ್ತಾಕ್ ಹುಸೇನ್ ಪದಪ್ರದಾನ ಮಾಡಿದರು.
ಬ್ರಿಗೇಡಿಯರ್ ಮುಹಮ್ಮದ್ ಮುಷ್ತಾಕ್ ಹುಸೇನ್ ಪರಿಚಯ
ಮೂಲತಃ ಕನ್ನಡಿಗರಾದ ಬ್ರಿಗೇಡಿಯರ್ ಮುಹಮ್ಮದ್ ಮುಷ್ತಾಕ್ ಹುಸೇನ್, ರಾಯಚೂರಿನ ಸೈಂಟ್ ಮೆರೀಸ್ ಕಾನ್ವೆಂಟ್‌ನಲ್ಲಿ ಪ್ರಾಥಮಿಕ ಶಿಕ್ಷಣ, ಕಲಬುರ್ಗಿಯ ಸೈಂಟ್ ಜೋಸೆಫ್ ಕಾನ್ವೆಂಟ್‌ನಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದರು. ಮೈಸೂರಿನ ಯುವರಾಜ ಕಾಲೇಜಿನಿಂದ ವಿಜ್ಞಾನದಲ್ಲಿ ಸ್ನಾತಕ ಪದವಿ, ಪುಣೆಯ ಸಿಂಬಯೋಸಿಸ್ ವಿಶ್ವವಿದ್ಯಾಲಯದಿಂದ ಎಂಬಿಎ, ಇಂದೋರ್ ವಿಶ್ವವಿದ್ಯಾಲಯದಿಂದ ಪಿಜಿಡಿಸಿಎ, ಐಐಎಂ-ಬೆಂಗಳೂರಿನಿಂದ ಮ್ಯಾನೇಜ್‌ಮೆಂಟ್ ಪದವಿ ಮತ್ತು ಮದ್ರಾಸ್ ವಿಶ್ವವಿದ್ಯಾಲಯದಿಂದ ಮನಃಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಪಡೆದಿದ್ದಾರೆ.
1981ರಲ್ಲಿ ದೆಹರಾದೂನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ಪಡೆದು ಲೆಫ್ಟಿನೆಂಟ್ ಆಗಿ ತೇರ್ಗಡೆಯಾಗಿ, ರೆಜಿಮೆಂಟ್ ಆಫ್ ಆರ್ಟಿಲರಿಯಲ್ಲಿ ಸೇವೆ ಸೇರಿದರು. ಕಾಶ್ಮೀರ ಮತ್ತು ಈಶಾನ್ಯ ಭಾರತದಲ್ಲಿ ಉಗ್ರಗಾಮಿತ್ವ ನಿಗ್ರಹ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ಇವರು, ಕಾರ್ಗಿಲ್ ಯುದ್ಧದಲ್ಲಿ ಬೋಫೋರ್ಸ್ ಗನ್‌ಗಳಿಂದ ಮಲ್ಟಿ ಬ್ಯಾರೆಲ್ ರಾಕೆಟ್ ಲಾಂಚರ್‌ಗಳವರೆಗೆ ನಿರ್ವಹಿಸಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿನ ಶೌರ್ಯಕ್ಕಾಗಿ ಭಾರತದ ರಾಷ್ಟ್ರಪತಿಗಳಿಂದ ಸೇನಾ ಪದಕ (ಗ್ಯಾಲಂಟ್ರಿ) ಪಡೆದ ಇವರು, ಕರ್ನಾಟಕದ ಇಬ್ಬರು ಪುರಸ್ಕೃತರಲ್ಲಿ ಒಬ್ಬರು. ಸೇನೆಯ ಎಲ್ಲಾ ಪ್ರಮುಖ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ ಇವರು, ಸುಮಾರು ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಪಡೆದ ಪದಕಗಳು: ಸೇನಾ ಪದಕ (ಗ್ಯಾಲಂಟ್ರಿ), ಆಪರೇಷನ್ ರೈನೋ, ಪರಾಕ್ರಮ, ವಿಜಯ್, ರಕ್ಷಕ್, ಹೈ ಆಲ್ಟಿಟ್ಯೂಡ್ ಸರ್ವೀಸ್, ನೇಫಾ, ಆಪರೇಷನ್ ಫಾಲ್ಕನ್ ಮತ್ತು ಇತರ ಸೇವಾ ಪದಕಗಳು. ಈಸ್ಟರ್ನ್ ಕಮಾಂಡ್‌ನಿಂದ ವೃತ್ತಿಪರ ದಕ್ಷತೆಗೆ ಪ್ರಶಂಸೆ ಪತ್ರ ಪಡೆದಿದ್ದಾರೆ.
ನಿವೃತ್ತಿಯ ನಂತರ, ಬೆಂಗಳೂರಿನ ಯುಆರ್‌ಸಿ ಕನ್‌ಸ್ಟ್ರಕ್ಷನ್‌ನ ಅಧ್ಯಕ್ಷರಾಗಿರುವ ಇವರು, ಮೆಟ್ರೋ ಯೋಜನೆಗಳು, ವಿಮಾನ ನಿಲ್ದಾಣಗಳು, ಐಐಎಂ, ಐಐಎಸ್‌ಸಿ, ಅಮೆಜಾನ್ ಡೇಟಾ ಸೆಂಟರ್‌ಗಳು ಸೇರಿದಂತೆ ವಿವಿಧ ಯೋಜನೆಗಳನ್ನು ಮುನ್ನಡೆಸುತ್ತಿದ್ದಾರೆ. ಡಾ. ನೂರ್ ಝಹ್ರಾ ಜಾಫರ್ (ಎಂಎಸ್‌ಸಿ, ಪಿಎಚ್‌ಡಿ) ಜೊತೆ ವಿವಾಹವಾಗಿರುವ ಇವರಿಗೆ ಇಬ್ಬರು ಪುತ್ರಿಯರು.
ಕಾರ್ಯಕ್ರಮದಲ್ಲಿ ನ್ಯಾಯವಾದಿ ಅನಿಷ ಪಾಶ, ಡಾ. ಮಹ್ಮದ್‌ಶಫಿ ಪಾಟೀಲ, ರೇಖಾ ಪಾಟೀಲ, ಜಮೀರ್ ಅಹ್ಮದ್ ರಶಾದಿ, ಎಸ್.ಎಂ. ಪಾಟೀಲ ಗಣಿಹಾರ, ಎಸ್.ಎಸ್. ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.