Tag: War

  • ನಾಳೆ ಮಾಕ್‌ ಡ್ರಿಲ್‌

    ನವದೆಹಲಿ (ಮೇ.06): ಪಹಲ್ಗಾಂ ಭಯೋತ್ಪಾದಕ ದಾಳಿ ನಂತರ ಪಾಕಿಸ್ತಾನದ ಜತೆ ಹೆಚ್ಚುತ್ತಿರುವ ಯುದ್ಧ ಉದ್ವಿಗ್ನತೆಯ ನಡುವೆಯೇ ಮಹತ್ವದ ಕ್ರಮವೊಂದರಲ್ಲಿ ಕೇಂದ್ರ ಗೃಹ ಸಚಿವಾಲಯವು ಮೇ 7ರ ಬುಧವಾರದಂದು ಪೂರ್ಣ ಪ್ರಮಾಣದ ನಾಗರಿಕ ರಕ್ಷಣಾ ಅಣಕು ಕವಾಯತುಗಳನ್ನು (ಮಾಕ್‌ ಡ್ರಿಲ್‌) ನಡೆಸುವಂತೆ ರಾಜ್ಯಗಳಿಗೆ ನಿರ್ದೇಶನ ನೀಡಿದೆ. 1971ರ ಬಾಂಗ್ಲಾ ವಿಮೋಚನಾ ಯುದ್ಧದ ಬಳಿಕ ಭಾರತದಲ್ಲಿ ಇಂಥ ತಾಲೀಮು ನಡೆಯುತ್ತಿರುವುದು ಇದೇ ಮೊದಲು. ಏ.22ರಂದು ಜಮ್ಮು-ಕಾಶ್ಮೀರದ ಪಹಲ್ಗಾಂನಲ್ಲಿ 25 ಪ್ರವಾಸಿಗರು ಸೇರಿದಂತೆ 26 ನಾಗರಿಕರನ್ನು ಉಗ್ರರು ಹತ್ಯೆ ಮಾಡಿದ್ದರು.

    ನಾಳೆ ಏನು ನಡೆಯುತ್ತೆ?

    1. ವಾಯುದಾಳಿ ಎಚ್ಚರಿಕೆ ಸೈರನ್‌: ಶತ್ರುಗಳ ವಾಯುದಾಳಿಯ ಸಂದರ್ಭದಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಯುದ್ಧ ಸೈರನ್‌ಗಳು ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.

    2. ನಾಗರಿಕರಿಗೆ ರಕ್ಷಣಾ ತರಬೇತಿ: ಪ್ರತಿಕೂಲ ದಾಳಿಯ ಸಂದರ್ಭದಲ್ಲಿ ರಕ್ಷಿಸಿಕೊಳ್ಳುವ ವಿಧಾನಗಳ ಕುರಿತು ನಾಗರಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಪ್ರಸ್ತುತ ಪೀಳಿಗೆಯು ಎಂದಿಗೂ ಯುದ್ಧವನ್ನು ನೋಡಿಲ್ಲ. ಹೀಗಾಗಿ ಇದು ಮುಖ್ಯವಾಗಿದೆ.

    3. ಬ್ಲ್ಯಾಕ್‌ ಔಟ್‌ ಡ್ರಿಲ್‌: ವಾಯುದಾಳಿಯ ಸಂದರ್ಭದಲ್ಲಿ ನಗರಗಳು ಮತ್ತು ಹಳ್ಳಿಗಳಲ್ಲಿ ಸಂಪೂರ್ಣ ವಿದ್ಯುತ್‌ ಕಡಿತ ಮಾಡಲಾಗುತ್ತದೆ. ರಾತ್ರಿ ವಾಹನಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗುತ್ತದೆ. ಇದರ ಪರೀಕ್ಷೆ ಈಗ ನಡೆಯಲಿದೆ. ವೈರಿ ದೇಶಗಳಿಗೆ ಊರುಗಳ ಗುರುತು ಪತ್ತೆ ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತದೆ.

    4. ಪ್ರಮುಖ ಸ್ಥಾವರಗಳ ಮರೆಮಾಚುವಿಕೆ: ನಮ್ಮ ಪ್ರಮುಖ ಸ್ಥಾವರಗಳು ಸುರಕ್ಷಿತವಾಗಿರುವುದನ್ನು ಮತ್ತು ಶತ್ರುಗಳ ಬಾಂಬ್ ದಾಳಿಗೆ ತುತ್ತಾಗದಂತೆ ನೋಡಿಕೊಳ್ಳುವುದು ಇದರ ಉದ್ದೇಶ.

    5. ಸ್ಥಳಾಂತರ ಯೋಜನೆಯ ಪೂರ್ವಾಭ್ಯಾಸ: ದುರ್ಗಮ ಪ್ರದೇಶಗಳಿಂದ ನಾಗರಿಕರನ್ನು ಹೇಗೆ ಸ್ಥಳಾಂತರಿಸಬಹುದು ಮತ್ತು ರಕ್ಷಿಸಬಹುದು ಎಂಬುದನ್ನು ಪರೀಕ್ಷಿಸಲು ಇದನ್ನು ನಡೆಸಲಾಗುತ್ತದೆ.

    ಎಲ್ಲಿ?

    ಕರ್ನಾಟಕದಲ್ಲಿ, ಬೆಂಗಳೂರು ನಗರ, ಮಲ್ಲೇಶ್ವರ ಮತ್ತು ರಾಯಚೂರಿನ ಶಕ್ತಿನಗರದಲ್ಲಿ ನಡೆಸಲಾಗುವುದು.

    ‘ಬ್ಲ್ಯಾಕೌಟ್‌ ಡ್ರಿಲ್‌’: ಭಾನುವಾರವಷ್ಟೆ ಯುದ್ಧದ ಪರಿಸ್ಥಿತಿಯನ್ನು ಎದುರಿಸುವ ತಾಲೀಮಿನ ಭಾಗವಾಗಿ, ಪಂಜಾಬ್‌ನ ಫಿರೋಜ್‌ಪುರದ ಕಂಟೋನ್ಮೆಂಟ್ ಪ್ರದೇಶದಲ್ಲಿ ರಾತ್ರಿ 9 ರಿಂದ 9.30ರವರೆಗೆ ವಿದ್ಯುತ್‌ ಕಡಿತ ಮಾಡಿ ‘ಬ್ಲ್ಯಾಕೌಟ್‌ ಡ್ರಿಲ್‌’ ನಡೆಸಲಾಗಿತ್ತು. ಈ ವೇಳೆ ವಾಹನ ಸಂಚಾರವನ್ನೂ ನಿಲ್ಲಿಸಿ ಅವುಗಳ ಲೈಟ್‌ ಆಫ್‌ ಮಾಡಲಾಗಿತ್ತು. ‘ಯುದ್ಧದ ಸಂದರ್ಭದಲ್ಲಿ ವೈರಿಗಳಿಂದ ರಕ್ಷಣೆ ಪಡೆಯಲು ಭದ್ರತಾ ದೃಷ್ಟಿಯಿಂದ ವಿದ್ಯುತ್‌ ತೆಗೆಯಲಾಗುತ್ತದೆ. ಆದ್ದರಿಂದ ಪೂರ್ವಾಭ್ಯಾಸ ನಡೆಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದರು.