ಕಾರವಾರ: ಅಂಕೋಲಾ ತಾಲೂಕಿನ ಶೇಡಿಕುಳ್ಳಿ ಸಮುದ್ರತೀರದಲ್ಲಿ ಮಂಗಳವಾರ ಬೆಳಿಗ್ಗೆ ಬೃಹತ್ ತಿಮಿಂಗಿಲವೊಂದರ ಕಳೇಬರ ಪತ್ತೆಯಾಗಿದೆ. ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಈ ತಿಮಿಂಗಿಲ ಸುಮಾರು ಒಂದು ವಾರದ ಹಿಂದೆ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.
ಶೇಡಿಕುಳ್ಳಿ ಕಡಲ ತೀರದಲ್ಲಿ ತಿಮಿಂಗಿಲದ ಕಳೇಬರವನ್ನು ಗಮನಿಸಿದ ಸ್ಥಳೀಯ ಮೀನುಗಾರರು, ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಿದ್ದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಹೆಚ್ಚುತ್ತಿರುವ ಕಡಲ ಜೀವಿಗಳ ಕಳೇಬರ: ಇತ್ತೀಚಿನ ದಿನಗಳಲ್ಲಿ ಉತ್ತರಕನ್ನಡ ಕರಾವಳಿ ತೀರದಲ್ಲಿ ಕಡಲ ಜೀವಿಗಳ ಕಳೇಬರಗಳು ಪತ್ತೆಯಾಗುವುದು ಹೆಚ್ಚಾಗಿದೆ. ಇದು ಕಡಲ ಪರಿಸರ ವ್ಯವಸ್ಥೆಯಲ್ಲಿನ ಬದಲಾವಣೆಗಳು ಅಥವಾ ಇತರ ಕಾರಣಗಳ ಬಗ್ಗೆ ಆತಂಕ ಮೂಡಿಸಿದೆ.
2023ರ ಮಾರ್ಚ್ ತಿಂಗಳಲ್ಲಿ, ಅಂಕೋಲಾ ತಾಲೂಕಿನ ಅಲಗೇರಿ ಗ್ರಾಮದ ಬಳಿಯ ಅಸ್ಸು ದಂಡೆಯಲ್ಲಿ 40 ಅಡಿ ಉದ್ದದ ಬೃಹತ್ ತಿಮಿಂಗಿಲವೊಂದರ ಕಳೇಬರ ಪತ್ತೆಯಾಗಿತ್ತು. ಕೊಳೆತ ಸ್ಥಿತಿಯಲ್ಲಿದ್ದ ಈ ತಿಮಿಂಗಿಲವನ್ನು ಸ್ಥಳದಲ್ಲೇ ಜೆಸಿಬಿ ಬಳಸಿ ಹೂಳಲಾಗಿತ್ತು. ಕಳೆದ ವರ್ಷ ಗೋಕರ್ಣದ ಮುಖ್ಯ ಕಡಲತೀರದಲ್ಲಿ ತಿಮಿಂಗಿಲ ಕಳೇಬರ ಪತ್ತೆಯಾಗಿತ್ತು. ಇದು ಸುಮಾರು 25 ಅಡಿ ಉದ್ದವಿತ್ತು.
ಇನ್ನು ಕಳೆದ ಕೆಲವು ವರ್ಷಗಳಿಂದ ಉತ್ತರ ಕನ್ನಡ ಕರಾವಳಿಯಲ್ಲಿ ಡಾಲ್ಫಿನ್‌ಗಳ ಕಳೇಬರಗಳು ಸಹ ಪತ್ತೆಯಾಗುತ್ತಿವೆ. ಪ್ಲಾಸ್ಟಿಕ್ ಸೇವನೆಯಿಂದಲೇ ಅಪರೂಪದ ಡಾಲ್ಫಿನ್ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಠಾಗೋರ್ ಕಡಲತೀರದಲ್ಲಿ ಇತ್ತೀಚೆಗೆ ನಡೆದಿತ್ತು.
“ಡಾಲ್ಫಿನ್ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಬಲೆಯ ತುಂಡುಗಳು ಸಿಕ್ಕಿವೆ. ಇದು ಪ್ಲಾಸ್ಟಿಕ್ ಸೇವನೆಯಿಂದಲೇ ಡಾಲ್ಫಿನ್ ಸಾವನ್ನಪ್ಪಿದೆ ಎಂಬುದನ್ನು ಸೂಚಿಸುತ್ತದೆ. ಜಿಲ್ಲೆಯ ಕಡಲತೀರದಲ್ಲಿ ಆಗಾಗ ಪತ್ತೆಯಾದ ಪ್ರಕರಣಗಳಲ್ಲಿ ಪ್ಲಾಸ್ಟಿಕ್ ಸೇವನೆ ಸಾವಿಗೆ ಕಾರಣವಾಗಿದೆ. ಇದಲ್ಲದೇ ಯಾವುದಾದರೂ ಬಂಡೆ ಇಲ್ಲವೇ ಹಡಗುಗಳಿಗೆ ಡಿಕ್ಕಿಯಾಗಿ ಸಾವನ್ನಪ್ಪುತ್ತವೆ. ಇದರ ಜೊತೆಗೆ ಕಡಲಾಮೆ, ಮೀನುಗಳು ಸೇರಿದಂತೆ ಜಲಚರಗಳು ಇದರ ದುಷ್ಪರಿಣಾಮ ಎದುರಿಸುತ್ತಿವೆ. ಪ್ಲಾಸ್ಟಿಕ್ ಬಳಕೆ ನಿವಾರಣೆ ಬಗ್ಗೆ ಜನ ಜಾಗೃತರಾಗಬೇಕು” ಎಂದು ಅರಣ್ಯ ಅಧಿಕಾರಿ ಕೆ.ಡಿ.ನಾಯ್ಕ್ ಮನವಿ ಮಾಡಿದ್ದರು.
ಪದೇ ಪದೆ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಕಡಲ ಜೀವಿಗಳ ಸಾವಿನ ಅನುಮಾನ ಹುಟ್ಟುವಂತೆ ಮಾಡಿದೆ. ಕಡಲ ಮಾಲಿನ್ಯ, ಮೀನುಗಾರಿಕೆ ಚಟುವಟಿಕೆಗಳು, ಹವಾಮಾನ ವೈಪರೀತ್ಯಗಳು ಅಥವಾ ಇತರ ನೈಸರ್ಗಿಕ ಕಾರಣಗಳು ಈ ಸಾವುಗಳಿಗೆ ಕಾರಣವಾಗಿರಬಹುದೇ ಎಂಬುದರ ಬಗ್ಗೆ ತಜ್ಞರು ಹೆಚ್ಚಿನ ಸಂಶೋಧನೆ ನಡೆಸಬೇಕು ಎಂಬುದು ಈ ಭಾಗದ ಮೀನುಗಾರರು ಹಾಗೂ ಸಾರ್ವಜನಿಕರ ಒತ್ತಾಯವಾಗಿದೆ.