Tag: worker

  • ಕಾರ್ಕಳ: ಕಲ್ಲುಕೋರೆಯಲ್ಲಿ ಸ್ಪೋಟಕ ಸಿಡಿದು ಕಾರ್ಮಿಕನಿಗೆ ಗಂಭೀರ ಗಾಯ

    ಕಾರ್ಕಳ: ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದಲ್ಲಿ ಫ್ರಾನ್ಸಿಸ್ ಡಿಸೋಜ ಎಂಬವರ ಕಲ್ಲುಕೋರೆಯಲ್ಲಿ ಕೆಲಸ ಮಾಡುತ್ತಿದ್ದ ರಾಯಚೂರಿನ ಶಿವರಾಜ್ (27) ಎಂಬ ಕಾರ್ಮಿಕನಿಗೆ ಸ್ಪೋಟಕ ಸಿಡಿದ ಪರಿಣಾಮ ತಲೆಗೆ ಮಾರಣಾಂತಿಕ ಗಾಯವಾಗಿರುವ ಘಟನೆ ನಡೆದಿದೆ. ಈ ಕುರಿತು ಶಿವರಾಜ್‌ರ ಪತ್ನಿ ಪಲ್ಲವಿ (25) ಅವರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಘಟನೆಯ ವಿವರಗಳ ಪ್ರಕಾರ, ದಿನಾಂಕ 08/05/2025 ರಂದು ಮಧ್ಯಾಹ್ನ 1:40 ಗಂಟೆಗೆ ಶಿವರಾಜ್ ಮತ್ತು ಇತರ ಕಾರ್ಮಿಕರು ಕಂಪ್ರೆಸರ್ ಬಳಸಿ ಕಲ್ಲುಕೋರೆಯಲ್ಲಿ ಸಿಡಿಮದ್ದು ಸಿಡಿಸಲು ಡ್ರಿಲಿಂಗ್ ಕಾರ್ಯ ನಡೆಸಿದ್ದರು. ಡ್ರಿಲಿಂಗ್ ಮುಗಿಸಿ ಕಲ್ಲುಕೋರೆಯಿಂದ ಹೊರಬಂದು ಕಂಪ್ರೆಸರ್ ಬಳಿ ಕುಳಿತಿದ್ದ ವೇಳೆ, ಕಲ್ಲು ಸಿಡಿಸಲು ಇಟ್ಟಿದ್ದ ಸ್ಪೋಟಕವು ಸಿಡಿದಿದೆ. ಈ ವೇಳೆ ವೇಗವಾಗಿ ಬಂದ ಕಲ್ಲೊಂದು ಕಂಪ್ರೆಸರ್‌ಗೆ ಬಡಿದು, ಶಿವರಾಜ್‌ರ ತಲೆಯ ಎಡಭಾಗಕ್ಕೆ ತಗುಲಿದ್ದರಿಂದ ಗಂಭೀರ ರಕ್ತಗಾಯವಾಗಿದೆ.

    ದೂರಿನಲ್ಲಿ, ಕಲ್ಲುಕೋರೆಯ ಮಾಲಿಕ ಫ್ರಾನ್ಸಿಸ್ ಡಿಸೋಜ ಮತ್ತು ಸ್ಪೋಟಕ ಸಿಡಿಸಿದ ಜೋಸೆಫ್ ರಿಚರ್ಡ್ ಡಿಸೋಜ ಎಂಬವರು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ, ನಿರ್ಲಕ್ಷ್ಯದಿಂದ ಕಾರ್ಯನಿರ್ವಹಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 61/2025ರಡಿಯಲ್ಲಿ ಕಲಂ 288, 125(a), 125(b) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.

    ಮುಂದಿನ ತನಿಖೆ ನಡೆಯುತ್ತಿದೆ.