ಅಶ್ರಫ್ ಗುಂಪುಹತ್ಯೆ: ಪಾಕಿಸ್ತಾನ ಪರ ಘೋಷಣೆಗೆ ಯಾವುದೇ ಸಾಕ್ಷ್ಯವಿಲ್ಲ: ಕಮಿಷನರ್

ಮಂಗಳೂರು: ಮಂಗಳೂರು ಹೊರವಲಯದ ಕುಡುಪು ಪ್ರದೇಶದಲ್ಲಿ ಭಾನುವಾರ ಸಂಭವಿಸಿದ ಅಶ್ರಫ್ ಗುಂಪುಹತ್ಯೆಗೆ ಸ್ಪಷ್ಟವಾದ ಕಾರಣ ಇನ್ನೂ ಪತ್ತೆಯಾಗಿಲ್ಲ. ಕೊಲೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಹರಡುತ್ತಿರುವ ಕಾರಣಗಳ ಕುರಿತು ನಮಗೆ ಯಾವುದೇ ದೃಢವಾದ ಸಾಕ್ಷ್ಯಗಳಿಲ್ಲ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಗುರುವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅಶ್ರಫ್ ಪಾಕಿಸ್ತಾನ ಪರ ಘೋಷಣೆ ಕೂಗಿದ ಕಾರಣಕ್ಕಾಗಿ ಆತನ ಮೇಲೆ ಗುಂಪು ಹಲ್ಲೆ ಮಾಡಿ ಕೊಲೆ ಮಾಡಿದೆ ಎಂಬ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಹೇಳಿಕೆಗೆ ಯಾವುದೇ ಆಧಾರವಿಲ್ಲ ಎಂಬುದು ಇದೀಗ ದೃಢವಾಗಿದೆ.

ಅಲ್ಲಿದ್ದ ಸಾಕ್ಷಿಗಳು ಹಾಗೂ ಆರೋಪಿಗಳು “ಒಬ್ಬನು ಇನ್ನೊಬ್ಬನ ಮೇಲೆ ಹಲ್ಲೆ ನಡೆಸುತ್ತಿದ್ದನು. ಆಗ ಅಲ್ಲಿದ್ದವರು ಗುಂಪಾಗಿ ಸೇರಿಕೊಂಡು ಆತನ ಮೇಲೆ ಹಲ್ಲೆ ನಡೆಸಿದರು” ಎಂದು ಮಾತ್ರ ಹೇಳಿರುವುದಾಗಿ ಕಮಿಷನರ್ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಶ್ರಫ್ ಮೇಲೆ ಹಲ್ಲೆಯೂ ಹಾಗೂ ಕೊಲೆಯೂ ನಡೆದ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಪಾಕಿಸ್ತಾನ ಪರ ಘೋಷಣೆ ಕೂಗಿದ ಕುರಿತು ಯಾವುದೇ ಪ್ರತ್ಯೇಕ ಪ್ರಕರಣವೂ ದಾಖಲಾಗಿಲ್ಲ ಎಂದು ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು “ಅಶ್ರಫ್ ಪಾಕಿಸ್ತಾನ ಪರ ಘೋಷಣೆ ಕೂಗಿದ್ದರಿಂದ ಗುಂಪು ಹಲ್ಲೆ ಮಾಡಿಕೊಂಡು ಕೊಲೆ ಮಾಡಿದ್ದಾರೆ” ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾದ ನಂತರ, “ಅವನು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾನೆ ಎಂದು ನಾನು ಹೇಳಿಲ್ಲ; ಆರೋಪಿಗಳು ಹೀಗಂತ ಹೇಳಿದ್ದಾರೆ ಎಂದು ನಾನು ಉಲ್ಲೇಖಿಸಿದ್ದೆ” ಎಂದು ಸ್ಪಷ್ಟೀಕರಣ ನೀಡಿ ಮತ್ತಷ್ಟು ಗೊಂದಲ ಉಂಟುಮಾಡಿದ್ದರು. ಇದಕ್ಕೂ ಮುನ್ನ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕೊಲೆ ವಿವರಿಸಿದ್ದ ಪೊಲೀಸ್ ಕಮಿಷನರ್ ಅಶ್ರಫ್ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಅವರು ಇಂತಹ ವದಂತಿಗಳನ್ನು ನಿರಾಕರಿಸಿದ್ದರು.

ಗೃಹ ಸಚಿವರ ಹೇಳಿಕೆಯ ಬಳಿಕ ಬಹುತೇಕ ಮಾಧ್ಯಮಗಳು “ಪಾಕಿಸ್ತಾನ ಪರ ಘೋಷಣೆ ಕೂಗಿದ್ದರಿಂದ ಕೊಲೆ” ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿದ್ದವು.

ಗುರುವಾರ ಮತ್ತೊಮ್ಮೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ ಕಮಿಷನರ್ “ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಕಾರಣದ ಕುರಿತು ನಮಗೆ ಯಾವುದೇ ಮಾಹಿತಿ ಇಲ್ಲ” ಎಂದು ಹೇಳಿದ್ದಾರೆ. ಈ ಮೂಲಕ ಪಾಕಿಸ್ತಾನ ಪರ ಘೋಷಣೆ ಕೂಗಿದ ಎಂಬುದು ಯಾವುದೇ ಆಧಾರವಿಲ್ಲದ ವದಂತಿ ಎಂಬುದು ಸ್ಪಷ್ಟವಾಗಿದೆ.

ಕುಡುಪು ಗುಂಪು ಹತ್ಯೆ ಪ್ರಕರಣ: ಇನ್‌ಸ್ಪೆಕ್ಟರ್ ಶಿವಕುಮಾರ್ ಸೇರಿ 3 ಪೊಲೀಸ್ ಸಿಬ್ಬಂದಿಗೆ ಅಮಾನತು

ಮಂಗಳೂರು: ಗುಂಪು ಹತ್ಯೆ ಪ್ರಕರಣ; ಗುರುತು ಪತ್ತೆ, ಮೃತ ದೇಹ ಹಸ್ತಾಂತರ

ಮಂಗಳೂರು ಗುಂಪು ಹತ್ಯೆ: ಪಾಕ್-ಪರ ಘೋಷಣೆ ಆರೋಪದ ತನಿಖೆ ಜಾರಿ, ಕಠಿಣ ಕ್ರಮದ ಭರವಸೆ

Comments

Leave a Reply

Your email address will not be published. Required fields are marked *