Author: NewsDesk

  • ಮರಳಿ ಬರಲಿಲ್ಲ…(ಕಡಲಲ್ಲಿ ಕಳೆದು ಹೋದ ಕನಸುಗಳು)

    ಮಳೆಯ ನಡುವೆ ಹೊರಟಿದ್ದರು ದೋಣಿಯಲಿ,

    ನಾಲ್ಕು ಜೀವಗಳು, ನಾಲ್ಕು ಕನಸುಗಳು…

    ಒಬ್ಬನು ದಡ ಸೇರಿದ,

    ಮೂವರು ಮರಳಿ ಬರಲಿಲ್ಲ…

    ಅಮ್ಮನ ಕಣ್ಣಿಗೆ ನಿದ್ರೆ ಬಂದಿಲ್ಲ,

    ಬಾಗಿಲು ಇನ್ನೂ ತೆರೆದೇ ಇದೆ,ಮಕ್ಕಳ ಪ್ರಶ್ನೆಗಳಿಗೆ ಉತ್ತರವೇ ಇಲ್ಲ,

    ಪತ್ನಿಯ ಹೃದಯದಲ್ಲಿ ಪಾಳುಬಿದ್ದ ಆಸೆ –

    ಹೌದು, ಈ ಬಾರಿ ಮರಳಿ ಬರಲಿಲ್ಲ…

    ಆ ದೋಣಿ ಕೇವಲ ಕಡಲಲ್ಲಿ ಅಲ್ಲ,

    ಒಂದು ಊರಿನ ನಂಬಿಕೆಯಲ್ಲಿ ಮುಳುಗಿತು.

    ಅವರ ಕುಟುಂಬದ ಭರವಸೆಯೂ ಮುಳುಗಿತು.

    ಅವರು ಹೋದರು…

    ಹೃದಯಗಳಲ್ಲಿ ನೆನೆಪಾಗಿ ಉಳಿದರು.

    ಕಣ್ಣೀರು ಮಾತ್ರ ದಡ ಸೇರುವಂತೆ ಹರಿದವು,

    ಆದರೆ ಅವರು ಮರಳಿ ಬರಲಿಲ್ಲ…

    • ಅನಾಮಿಕ ಗಂಗೊಳ್ಳಿ
  • ಅರಬ್ಬಿ ಸಮುದ್ರದಲ್ಲಿ ಬಿರುಗಾಳಿ ಸಾಧ್ಯತೆ: ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ

    ಉಡುಪಿ, ಜುಲೈ 15, 2025: ಭಾರತೀಯ ಹವಾಮಾನ ಇಲಾಖೆಯ ತಿರುವನಂತಪುರ ಕೇಂದ್ರವು ನೀಡಿರುವ ಮುನ್ಸೂಚನೆಯ ಪ್ರಕಾರ, ಲಕ್ಷದ್ವೀಪ, ಕೇರಳ ಮತ್ತು ಕರ್ನಾಟಕ ವ್ಯಾಪ್ತಿಯ ಅರಬ್ಬಿ ಸಮುದ್ರದಲ್ಲಿ 40-50 ಕಿ.ಮೀ. ಪ್ರತಿ ಗಂಟೆಯ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದ್ದು, ಕೆಲವೊಮ್ಮೆ ಗಂಟೆಗೆ 60 ಕಿ.ಮೀ. ವೇಗವೂ ದಾಟಬಹುದು. ಈ ಹಿನ್ನೆಲೆಯಲ್ಲಿ ಜುಲೈ 18ರವರೆಗೆ ಕರಾವಳಿ ತೀರದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

    ಸಾಂಪ್ರದಾಯಿಕ ಮೀನುಗಾರರು ತಮ್ಮ ದೋಣಿ ಮತ್ತು ಬಲೆಗಳನ್ನು ದಡದಲ್ಲಿ ಸುರಕ್ಷಿತ ಸ್ಥಳದಲ್ಲಿ ಇರಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ನಾಡದೋಣಿ, ಸಣ್ಣ ಮತ್ತು ಮಧ್ಯಮ ಗಾತ್ರದ ದೋಣಿಗಳು ಮೀನುಗಾರಿಕೆಗೆ ತೆರಳದಂತೆ ಎಚ್ಚರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮೀನುಗಾರಿಕೆಗೆ ತೆರಳುವಾಗ ಕಡ್ಡಾಯವಾಗಿ ಜೀವರಕ್ಷಕ ಸಾಧನಗಳನ್ನು ಬಳಸಬೇಕು ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಕರಾವಳಿಯ ಬಂದರುಗಳಾದ ಕಾರವಾರ, ಮಂಗಳೂರು, ಪಣಂಬೂರು, ಹೊನ್ನಾವರ, ಭಟ್ಕಳ, ಗಂಗೊಳ್ಳಿ, ಮತ್ತು ಮಾಲ್ಪೆಯಲ್ಲಿ ಸ್ಥಳೀಯವಾಗಿ ಸಂಖ್ಯೆ 2 ಎಚ್ಚರಿಕೆಯ ಸೂಚನೆಯನ್ನು ಹಾರಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ತೀವ್ರ ಮಳೆ: ಇಂದು ಬೆಳಗ್ಗೆ 8:30ರವರೆಗೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ 74.9ಮಿ.ಮೀ. ಮಳೆ ಜಿಲ್ಲೆಯಲ್ಲಿ ಬಿದ್ದಿದೆ. ಕುಂದಾಪುರದಲ್ಲಿ ಅತ್ಯಧಿಕ 97.4ಮಿ.ಮೀ. ಮಳೆಯಾದರೆ, ಬ್ರಹ್ಮಾವರದಲ್ಲಿ 93.9ಮಿ.ಮೀ.ಮಳೆ ಬಿದ್ದಿದೆ. ಹೆಬ್ರಿಯಲ್ಲಿ 81ಮಿ.ಮೀ.ಮಳೆಯಾಗಿದೆ.

    ಹಾನಿ ವರದಿ: ಇಂದು ಎರಡು ಮನೆಗಳಿಗೆ ಹಾನಿಯಾಗಿದ್ದು, ಕಾಪು ತಾಲೂಕಿನ ಕಳತ್ತೂರಿನ ಗೋಪ ಮುಖರಿ ಅವರ ಮನೆಯ ಮೇಲೆ ಮರ ಬಿದ್ದು ₹20,000ರಷ್ಟು ಹಾನಿ ಉಂಟಾಗಿದ್ದರೆ, ಕುಂದಾಪುರ ತಾಲೂಕಿನ ಮೊಳಹಳ್ಳಿಯ ಸಾದಮ್ಮ ಶೆಟ್ಟಿ ಅವರ ಮನೆಯ ಮೇಲೆ ಮರ ಬಿದ್ದು ₹25,000ರಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

  • ಗಂಗೊಳ್ಳಿ: ಮೀನುಗಾರರ ನಾಪತ್ತೆ ಪ್ರಕರಣ: ಸಚಿವರು, ಶಾಸಕ-ಸಂಸದರು ಭೇಟಿ; ಸಹಾಯಕ್ಕೆ ಒತ್ತಾಯ

    ಗಂಗೊಳ್ಳಿ, ಜುಲೈ 15, 2025: ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ ದೋಣಿ ಅಲೆಗಳ ಅಬ್ಬರಕ್ಕೆ ಮಗುಚಿಬಿದ್ದ ಪರಿಣಾಮ ಮೂವರು ಮೀನುಗಾರರು ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಇಂದು ಸಚಿವರು ಮತ್ತು ಶಾಸಕ-ಸಂಸದರು ಸ್ಥಳಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮೀನುಗಾರರ ಕುಟುಂಬಗಳಿಗೆ ನೆರವು ಒದಗಿಸುವಂತೆ ಮತ್ತು ಹುಡುಕಾಟಕ್ಕೆ ಹೆಲಿಕಾಪ್ಟರ್ ಬಳಕೆಯನ್ನು ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಯಿತು.

    ಬೆಳಗ್ಗೆ 6ರಿಂದ 6:30ರ ನಡುವೆ ಮೀನುಗಾರಿಕೆಗೆ ತೆರಳಿದ್ದ ಸುರೇಶ್ ಖಾರ್ವಿ (45), ಲೋಹಿತ್ ಖಾರ್ವಿ (38), ಮತ್ತು ಜಗದೀಶ್ (ಜಗ್ಗು) ಖಾರ್ವಿ (36) ಅವರ ದೋಣಿ ಬೆಳಗ್ಗೆ 7ರಿಂದ 8ರ ನಡುವೆ ಅಲೆಗಳಿಂದ ಮಗುಚಿಬಿಟ್ಟಿತು. ಈ ವೇಳೆ ಸಂತೋಷ್ ಖಾರ್ವಿ ಒಬ್ಬರು ರಕ್ಷಣೆಯಾಗಿದ್ದರೆ, ಉಳಿದ ಮೂವರು ಇನ್ನೂ ಪತ್ತೆಯಾಗಿಲ್ಲ. ಬಿಜೆಪಿ ಸಂಸದ ಬಿ.ವೈ. ರಾಘವೇಂದ್ರ (ಶಿವಮೊಗ್ಗ), ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಮತ್ತು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಇಂದು ಸ್ಥಳಕ್ಕೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದರು.

    ಬಿಜೆಪಿ ಸಂಸದ ಬಿ.ವೈ. ರಾಘವೇಂದ್ರ, “ಈ ದುರಂತದಲ್ಲಿ ಒಂದು ಕುಟುಂಬ ತನ್ನ ಏಕೈಕ ಆರ್ಥಿಕ ಆಸರೆಯನ್ನು ಕಳೆದುಕೊಂಡಿದೆ. ನಾವು ಸರ್ಕಾರಕ್ಕೆ ಕನಿಷ್ಠ ₹25 ಲಕ್ಷ ಪರಿಹಾರ ಧನ ಒದಗಿಸುವಂತೆ ಮನವಿ ಮಾಡುತ್ತೇವೆ. ಜನತಾ ಪರಿವಾರ ಯೋಜನೆಯ ಇನ್ಸೂರೆನ್ಸ್‌ನಿಂದ ₹5-6 ಲಕ್ಷ ಮತ್ತು ಸಚಿವ ಯಶ್ ಪಾಲ್ ಸುವರ್ಣ ಜೊತೆ ಸಮಾಲೋಚನೆಯ ನಂತರ ₹10 ಲಕ್ಷ ನೀಡಲಾಗುವುದು. ಆದರೆ ಈಗ ಹುಡುಕುವುದು ಅಗತ್ಯವಿದೆ. ಈಗಾಗಲೇ ಎಸ್‌ಪಿ, ಕರಾವಳಿ ಅಧಿಕಾರಿಗಳು, ದೋಣಿ ಮತ್ತು ಮೀನುಗಾರಿಕೆ ಇಲಾಖೆಗಳು ಹುಡುಕಾಟದಲ್ಲಿ ತೊಡಗಿವೆ. ಸಾಧ್ಯವಾದರೆ ಕರಾವಳಿ ಹೆಲಿಕಾಪ್ಟರ್ ಅನ್ನು ಬಳಸಬೇಕು ಎಂದು ಸರ್ಕಾರಕ್ಕೆ ವಿನಂತಿ ಮಾಡುತ್ತೇವೆ, ಇದರಿಂದ ಕನಿಷ್ಠ ಕುಟುಂಬಗಳಿಗೆ ಶಾಂತಿ ದೊರೆಯುತ್ತದೆ” ಎಂದು ಹೇಳಿದರು.

    ಈಗಾಗಲೇ ಕರಾವಳಿ ಕಾವಲು ಪಡೆ, ಅಗ್ನಿಶಾಮಕ ದಳ, ಸ್ಥಳೀಯ ಮೀನುಗಾರರು ಮತ್ತು ಡ್ರೋನ್‌ಗಳ ಸಹಾಯದಿಂದ ಹುಡುಕಾಟ ನಡೆಯುತ್ತಿದ್ದು, ಗಾಳಿ ಮಳೆಯ ಸಮಸ್ಯೆಯ ನಡುವೆಯೂ ಕಾರ್ಯಾಚರಣೆ ಮುಂದುವರಿದಿದೆ.

    Credit: Wizuals Gangolli
  • ಗಂಗೊಳ್ಳಿ: ಮೀನುಗಾರರ ಕಾಣೆಯಾಗಿರುವ ಪ್ರಕರಣ; ಉಡುಪಿ ಎಸ್‌ಪಿ ಹರಿರಾಮ್ ಶಂಕರ್ ಭೇಟಿ

    ಗಂಗೊಳ್ಳಿ, ಜುಲೈ 15, 2025: ಗಂಗೊಳ್ಳಿ ಸಮೀಪದ ಸಮುದ್ರದಲ್ಲಿ ಮೀನುಗಾರಿಕೆಯ ಸಂದರ್ಭದಲ್ಲಿ ಕಾಣೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಹರಿರಾಮ್ ಶಂಕರ್ ಇಂದು ಸ್ಥಳಕ್ಕೆ ಭೇಟಿ ನೀಡಿದರು. ಇಂದು ಬೆಳಗ್ಗೆ ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಅಲೆಗಳ ಅಬ್ಬರಕ್ಕೆ ಸಿಲುಕಿ ಮಗುಚಿಬಿದ್ದ ಪರಿಣಾಮ ಮೂವರು ಮೀನುಗಾರರು ನಾಪತ್ತೆಯಾಗಿದ್ದಾರೆ.

    ಶೋಧ ಕಾರ್ಯಾಚರಣೆಗೆ ಡ್ರೋನ್‌ಗಳನ್ನು ಬಳಸಲಾಗುತ್ತಿದೆ.

    ಇಂದು ಎಸ್ಪಿ ಹರಿರಾಮ್ ಶಂಕರ್ ಗಂಗೊಳ್ಳಿಗೆ ಭೇಟಿ ನೀಡಿ ರಕ್ಷಣಾ ತಂಡಗಳೊಂದಿಗೆ ಸಮನ್ವಯ ಸಾಧಿಸಿ ಶೋಧ ಕಾರ್ಯಾಚರಣೆಯನ್ನು ಚುರುಕುಗೊಳಿಸುವಂತೆ ಸೂಚನೆ ನೀಡಿದರು. ಈ ಹಂತದಲ್ಲಿ ಸಮುದ್ರ ಮತ್ತು ತೀರದಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ತನಿಖೆ ಮುಂದುವರೆದಿದೆ.

  • ಕುಂದಾಪುರ: ಕುಂದಾಪುರ-ತೊಂಬಟ್ಟು ಮಾರ್ಗದಲ್ಲಿ ಇಂದಿನಿಂದ ಬಸ್ ಸೇವೆ ಆರಂಭ

    ಕುಂದಾಪುರ, ಜುಲೈ 15, 2025: ಕುಂದಾಪುರ-ಕೋಟೇಶ್ವರ-ಬಿದ್ಕಲ್‌ಕಟ್ಟೆ-ಹಾಲಾಡಿ-ಅಮಾಸೆಬೈಲು ಮಾರ್ಗದಲ್ಲಿ ತೊಂಬಟ್ಟಿಗೆ ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರಿ ಬಸ್ ಸೇವೆಯನ್ನು ಇಂದಿನಿಂದ ಪುನರಾರಂಭಿಸಲಾಗಿದೆ.

    ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಇತ್ತೀಚೆಗೆ ಬಿಡುಗಡೆ ಮಾಡಿದ ಸುದ್ದಿಯಲ್ಲಿ, ಕುಂದಾಪುರ-ತೊಂಬಟ್ಟಗೆ ಮಾರ್ಗದಲ್ಲಿ ಸಾರಿಗೆ ಸೇವೆಯ ಕೊರತೆಯ ಬಗ್ಗೆ ವಿಧಾನಸಭೆಯಲ್ಲಿ ಸಾರಿಗೆ ಸಚಿವರೊಂದಿಗೆ ಚರ್ಚಿಸಿ, ಈ ಸೇವೆಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದರು. ಈ ಸಂದರ್ಭದಲ್ಲಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಪ್ರತಿದಿನ ಬೆಳಗ್ಗೆ 7:30 ಮತ್ತು ಸಾಯಂಕಾಲ 4:45ರಲ್ಲಿ ಸಾರಿಗೆ ನಿಗಮದ ಬಸ್ ಓಡಿಸುವ ಆದೇಶ ಪತ್ರವನ್ನು ಜಾರಿಗೆ ತರಲಾಗಿದೆ. ಈ ಸೇವೆಯಿಂದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ತಮ್ಮ ಪ್ರಯಾಣ ಸುಗಮವಾಗಲಿದೆ ಎಂದು ತಿಳಿಸಿದ್ದರು.

    ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಕುಂದಾಪುರ ಘಟಕವು ಜುಲೈ 12, 2025ರಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ ಶೆಟ್ಟರಿಗೆ ಪತ್ರ ಬರೆದು, ಜುಲೈ 15, 2025ರಿಂದ ಈ ಮಾರ್ಗದಲ್ಲಿ ಬಸ್ ಸೇವೆ ಆರಂಭವಾಗಲಿದೆ ಎಂದು ಘೋಷಿಸಿತ್ತು.

  • ವಿದ್ಯಾರ್ಥಿನಿ ಮೇಲೆ ರೇಪ್‌,ಬ್ಲ್ಯಾಕ್‌ಮೇಲ್‌ – ಮೂಡುಬಿದಿರೆ ಕಾಲೇಜಿನ ಇಬ್ಬರು ಉಪನ್ಯಾಸಕರು, ಸ್ನೇಹಿತ ಅರೆಸ್ಟ್‌

    ಬೆಂಗಳೂರು,ಜುಲೈ 15, 2025: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಬಿದಿರೆಯ ಪ್ರತಿಷ್ಠಿತ ಕಾಲೇಜಿನ ಇಬ್ಬರು ಉಪನ್ಯಾಸಕರು ಮತ್ತು ಅವರ ಸ್ನೇಹಿತನನ್ನು ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಕಾಲೇಜಿನ ಹಳೆ ವಿದ್ಯಾರ್ಥಿನಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಳು. ದೂರಿನ ಆಧಾರದಲ್ಲಿ ಎಫ್‌ಐಆರ್‌ ದಾಖಲಿಸಿದ ಪೊಲೀಸರು ಉಪನ್ಯಾಸಕರಾದ ನರೇಂದ್ರ, ಸಂದೀಪ್ ಮತ್ತು ಸ್ನೇಹಿತ ಅನೂಪ್‌ನನ್ನು ಬಂಧಿಸಿದ್ದಾರೆ.

    ಏನಿದು ಕೇಸ್‌?

    ಮೊದಲು ವಿದ್ಯಾರ್ಥಿನಿಗೆ ನೋಟ್ಸ್ ನೀಡುವ ವಿಚಾರದಲ್ಲಿ ಭೌತಶಾಸ್ತ್ರ ಉಪನ್ಯಾಸಕ ನರೇಂದ್ರ ಪರಿಚಯವಾಗಿದ್ದ. ಹಂತ ಹಂತವಾಗಿ ಚಾಟ್ ಮಾಡಿ ನೋಟ್ಸ್ ನೀಡುವುದಾಗಿ ಮತ್ತು ಸಹಾಯ ಮಾಡುವುದಾಗಿ ಹೇಳಿದ್ದ. ವಿದ್ಯಾರ್ಥಿನಿ ಬೆಂಗಳೂರಿಗೆ ಬಂದ ನಂತರವೂ ಸಲುಗೆ ಬೆಳೆಸಿದ್ದ. ಇದೆ ನೆಪದಲ್ಲಿ ವಿದ್ಯಾರ್ಥಿನಿಯನ್ನು ಬೆಂಗಳೂರಿನ ಮಾರತ್‌ಹಳ್ಳಿಯಲ್ಲಿರುವ ಗೆಳೆಯನ ರೂಮ್‌ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ರೇಪ್‌ ಮಾಡಿದ ಬಳಿಕ ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದ.

    ಸ್ನೇಹಿತ ನರೇಂದ್ರ ಈ ಕೃತ್ಯ ಎಸಗಿದ್ದ ವಿಚಾರ ತಿಳಿದು ಜೀವಶಾಸ್ತ್ರ ಉಪನ್ಯಾಸಕ ಸಂದೀಪ್‌ ವಿದ್ಯಾರ್ಥಿನಿಯನ್ನು ಸಂಪರ್ಕಿಸಿದ್ದಾನೆ. ಈ ವೇಳೆ ವಿದ್ಯಾರ್ಥಿನಿ ವಿರೋಧ ವ್ಯಕ್ತಪಡಿಸಿದ್ದಾಳೆ. ಈ ಸಂದರ್ಭದಲ್ಲಿ ಸಂದೀಪ್‌, ನರೇಂದ್ರ ಜೊತೆಗೆ ಇರುವ ಫೋಟೋ, ವಿಡಿಯೋ ತನ್ನ ಬಳಿ ಇದೆ ಎಂದು ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ ಎಸಗಿದ್ದಾನೆ.

    ಸಂದೀಪ್‌ ಕರೆದುಕೊಂಡು ಹೋಗಿ ಅನೂಪ್‌ ರೂಮಿನಲ್ಲಿ ಅತ್ಯಾಚಾರ ಎಸಗಿದ್ದ. ನಂತರ ಅನೂಪ್‌ ಆಕೆಯನ್ನು ಸಂರ್ಪಕಿಸಿ ನೀನು ನನ್ನ ರೂಮಿಗೆ ಬಂದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಷ್ಟೇ ಅಲ್ಲದೇ ನನ್ನ ರೂಮ್​​ನಲ್ಲಿ ಸಿಸಿಟಿವಿ ಇದೆ ಎಂದು ಬೆದರಿಕೆ ಹಾಕಿದ್ದ. ನಂತರ ಅನೂಪ್‌ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ.

    ಉಪನ್ಯಾಸಕ ಸ್ನೇಹಿತರ ಕಿರುಕುಳ ತಾಳಲಾರದೇ ಆರಂಭದಲ್ಲಿ ಸುಮ್ಮನಿದ್ದ ವಿದ್ಯಾರ್ಥಿನಿ ಸಮಸ್ಯೆ ಹೆಚ್ಚಾದ ಬಳಿಕ ನಡೆದ ನಡೆದ ಘಟನೆಗಳನ್ನು ಬೆಂಗಳೂರಿಗೆ ಬಂದಿದ್ದ ಪೋಷಕರ ಬಳಿ ತಿಳಿಸಿದ್ದಾಳೆ. ಪೋಷಕರು ಆಕೆಯನ್ನು ಮಹಿಳಾ ಆಯೋಗಕ್ಕೆ ಕರೆದುಕೊಂಡು ಹೋಗಿದ್ದಾರೆ. ಮಹಿಳಾ ಆಯೋಗದಲ್ಲಿ ಕೌನ್ಸಿಲಿಂಗ್‌ ಮಾಡಿದ ಬಳಿಕ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

    ಮೂಡಬಿದಿರೆಯಲ್ಲಿ ಓದು ಮುಗಿಸಿದ್ದ ವಿದ್ಯಾರ್ಥಿನಿ ಈಗ ರಾಮನಗರದಲ್ಲಿ ಎಂಜಿನಿಯರಿಂಗ್‌ ಓದುತ್ತಿದ್ದಾಳೆ. ಉಪನ್ಯಾಸಕರು ಇನ್‌ಸ್ಟಾ ಮೂಲಕ ಆಕೆಯನ್ನು ಸಂಪರ್ಕಿಸಿ ಚಾಟ್‌ ಮಾಡುತ್ತಿದ್ದರು.

  • ಸರಸ್ವತಿ ವಿದ್ಯಾಲಯದಲ್ಲಿ ಸಿಇಟಿ, ನೀಟ್ ವಿಶೇಷ ಕೋಚಿಂಗ್ ತರಬೇತಿ ಕಾರ್ಯಕ್ರಮ ಉದ್ಘಾಟನೆ 

    ಗಂಗೊಳ್ಳಿ,ಜುಲೈ 15, 2025: ಆನ್ಲೈನ್ ತರಗತಿಗಳಿಗೆ ಹೋಲಿಸಿದರೆ ವಿದ್ಯಾರ್ಥಿ ಶಿಕ್ಷಕರ ನೇರ ಮುಖಾಮುಖಿ ಸಂವಹನ  ಸಾಧ್ಯವಾಗುವ ಭೌತಿಕ ತರಗತಿಗಳು   ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚು ಪೂರಕವಾದ ಧನಾತ್ಮಕ ಪರಿಣಾಮವನ್ನು ಬೀರುತ್ತದೆ ಮತ್ತು ವಿದ್ಯಾರ್ಥಿಗಳು ಏಕಾಗ್ರತೆ ಹಾಗೂ ಬದ್ಧತೆಯಿಂದ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ  ಎಂದು ಜಿ ಎಸ್ ವಿ ಎಸ್ ಅಸೋಸಿಯೇಷನ್ ಕಾರ್ಯದರ್ಶಿ ಹೆಚ್. ಗಣೇಶ್ ಕಾಮತ್ ಅಭಿಪ್ರಾಯಪಟ್ಟರು.

     ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ಮೈಸೂರಿನ ಅರ್ಜುನ್ ಅಕಾಡೆಮಿಯ ಸಹಯೋಗದಲ್ಲಿ ಆರಂಭಗೊಂಡ  ಸಿಇಟಿ ಮತ್ತು ನೀಟ್ ತರಬೇತಿ ಕಾರ್ಯಕ್ರಮಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

     ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ ಸಿ ಅಧ್ಯಕ್ಷತೆ ವಹಿಸಿದ್ದರು.

     ಅರ್ಜುನ್ ಅಕಾಡೆಮಿಯ ಪ್ರದೀಪ್ ಎನ್. ಎಸ್ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಆಂಗ್ಲ ಭಾಷೆ ಉಪನ್ಯಾಸಕ ಥಾಮಸ್ ಪಿ. ಎ , ವಿಜ್ಞಾನ ವಿಭಾಗದ ಉಪನ್ಯಾಸಕಿಯರಾದ ಪವಿತ್ರ, ರಮ್ಯ ಮತ್ತು ಪಲ್ಲವಿ ಉಪಸ್ಥಿತರಿದ್ದರು. ನರೇಂದ್ರ ಎಸ್ ಗಂಗೊಳ್ಳಿ ವಂದಿಸಿದರು.

  • ನಾಪತ್ತೆಯಾದ ಮೀನುಗಾರ ಪತ್ತೆಗೆ ತುರ್ತು ಕ್ರಮದ ಜೊತೆಗೆ ತುರ್ತು ಪರಿಹಾರದ ವ್ಯವಸ್ಥೆ-ಶಾಸಕ ಗುರುರಾಜ್ ಗಂಟಿಹೊಳೆ

    ಬೈಂದೂರು,ಜುಲೈ 15, 2025: ಗಂಗೊಳ್ಳಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದ ದೋಣಿ ದುರಂತದಲ್ಲಿ ಒರ್ವ ಮೀನುಗಾರ ಅಪಾಯದಿಂದ ಪಾರಾಗಿದ್ದು ಮೂವರು ಮೀನುಗಾರರು ನಾಪತ್ತೆಯಾಗಿರುವ ಮಾಹಿತಿ ತಿಳಿದು ಬಂದಿದೆ. ಕಾಣೆಯಾಗಿರುವ ಮೀನುಗಾರರ ಪತ್ತೆಗೆ ಅಗತ್ಯ ತುರ್ತು ಕ್ರಮಕ್ಕೆ ಈಗಾಗಲೇ ನಿರ್ದೇಶಿಸಲಾಗಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ತಿಳಿಸಿದ್ದಾರೆ.

    ಮೀನುಗಾರ ಕುಟುಂಬಕ್ಕೆ ಮೀನುಗಾರಿಕೆ ಇಲಾಖೆಯ ಸಂಕಷ್ಟ ಪರಿಹಾರ ನಿಧಿಯಡಿ ಅಗತ್ಯ ಪರಿಹಾರ ಒದಗಿಸಲು ಶಾಸಕರಾದ ಯಶ್ ಪಾಲ್ ಸುವರ್ಣ ಸಹಿತ ಜಿಲ್ಲೆಯ ಶಾಸಕರ ಮೂಲಕ ಮೀನುಗಾರಿಕೆ ಇಲಾಖೆ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ. ಇಲಾಖೆಯಿಂದ ಕುಟುಂಬಕ್ಕೆ ತಲಾ 10 ಲಕ್ಷ ರೂ.ಗಳ ಪರಿಹಾರವನ್ನು ತುರ್ತಾಗಿ ಒದಗಿಸುವ ವ್ಯವಸ್ಥೆ ಆಗಿದೆ.

    ಮಳೆಗಾಲದಲ್ಲಿ ಸಮುದ್ರದ ಅಲೆಗಳ ಅಬ್ಬರವೂ ಜೋರಾಗಿರುತ್ತದೆ. ಹೀಗಾಗಿ ನಾಡದೋಣಿ, ಟ್ರಾಲ್ ದೋಣಿ ಮೀನುಗಾರರು ವಿಶೇಷ ಎಚ್ಚರಿಕೆ ವಹಿಸಬೇಕು ಮತ್ತು ಲೈಫ್ ಜಾಕೇಟ್ ಬಳಸುವುದನ್ನು ಆದಷ್ಟು ಕಡ್ಡಾಯ ಮಾಡಿಕೊಳ್ಳುವುದು ಉತ್ತಮ. ಲೈಫ್ ಜಾಕೇಟ್ ಬಳಸುವುದರಿಂದ ಜೀವ ಹಾನಿ ತಪ್ಪಿಸಲು ಸಾಧ್ಯವಿದೆ ಎಂದು ಶಾಸಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

    ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ ದೋಣಿಯು ಇಂದು ಸಮುದ್ರದ ಅಲೆಗೆ ಸಿಲುಕಿ ಮಗುಚಿ ಬಿದ್ದಿರುವ ಸುದ್ದಿ ಗಮನಕ್ಕೆ ಬಂದಿದ್ದು, ಅಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯ ಕ್ರಮ ವಹಿಸಲು ಸೂಚೊಸಲಾಯಿತು.

    ಅವಘಡದಲ್ಲಿ ಒಬ್ಬ ಮೀನುಗಾರ ಸುರಕ್ಷಿತವಾಗಿ ದಡ ಸೇರಿದ್ದು, ಉಳಿದ ಮೂವರ ರಕ್ಷಣೆಗೆ ಮೀನುಗಾರರು ಸೇರಿದಂತೆ ಜಿಲ್ಲಾಡಳಿತ ಧಾವಿಸಿದ್ದು, ಎಲ್ಲರೂ ಸುರಕ್ಷಿತವಾಗಿ ಮರಳಿ ಬರಲೆಂದು ಪ್ರಾರ್ಥಿಸೋಣ. – ಕಿರಣ್ ಕುಮಾರ್ ಕೊಡ್ಗಿ

    ಗಂಗೊಳ್ಳಿ ಬಂದರಿನಿಂದ ನಾಡ ದೋಣಿ ಮೀನುಗಾರಿಕೆಗೆ ತೆರಳಿದ ದೋಣಿಯು ಇಂದು ಸಮುದ್ರದ ಅಲೆಗೆ ಸಿಲುಕಿ ಮಗುಚಿ ಬಿದ್ದಿರುವ ದುರದೃಷ್ಟಕರ ಘಟನೆ ನಡೆದಿದೆ.

    ಘಟನೆಯ ಬಗ್ಗೆ ಈಗಾಲೇ ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಯವರೊಂದಿಗೆ ಸಮಾಲೋಚನೆ ನಡೆಸಿ ಮೀನುಗಾರಿಕಾ ಸಚಿವರಾದ ಮಂಕಲ್ ಎಸ್ ವೈದ್ಯ ರವರಿಗೂ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ಕಣ್ಮರೆಯಾಗಿರುವ ಮೀನುಗಾರರ ರಕ್ಷಣೆಗೆ ಅಗತ್ಯ ಕ್ರಮ ವಹಿಸಲು, ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ.

    ಅವಘಡದಲ್ಲಿ ಒಬ್ಬ ಮೀನುಗಾರ ಸುರಕ್ಷಿತವಾಗಿ ದಡ ಸೇರಿದ್ದು, ಉಳಿದ ಮೂವರ ರಕ್ಷಣೆಗೆ ಮೀನುಗಾರರು ಸೇರಿದಂತೆ ಜಿಲ್ಲಾಡಳಿತ ಧಾವಿಸಿದ್ದು, ಎಲ್ಲರ ಸುರಕ್ಷತೆಗೆ ಪ್ರಾರ್ಥಿಸೋಣ. – ಯಶ್ ಪಾಲ್ ಸುವರ್ಣ

  • ಗಂಗೊಳ್ಳಿ: ಮೀನುಗಾರರು ನಾಪತ್ತೆ ಪ್ರಕರಣ; ಸ್ಥಳಕ್ಕೆ ಮಾಜಿ ಶಾಸಕ ಗೋಪಾಲ ಪೂಜಾರಿ ಭೇಟಿ – ಪರಿಹಾರದ ಭರವಸೆ

    ಗಂಗೊಳ್ಳಿ, ಜುಲೈ 15, 2025:  ನಾಡದೋಣಿ ಮಗುಚಿ ನಾಪತ್ತೆಯಾದ ಮೂವರು ಮೀನುಗಾರರ ಪತ್ತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮಾಜೀ ಶಾಸಕ ಗೋಪಾಲ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಗಂಗೊಳ್ಳಿಯಲ್ಲಿ ನಡೆದ ಈ ದುರಂತ ತುಂಬಾ ನೋವು ತಂದಿದೆ, ಜಿಲ್ಲಾದ್ಯಂತ ಈ ತರಹದ ಘಟನೆ ಹಿಂದಿನ ದಿನಗಳಲ್ಲಿ ನಡೆದಿದೆ, ಅದರೊ ನಮ್ಮ ಜನ ಎಚ್ಚೆತ್ತುಕೊಳ್ಳದೆ, ಮಳೆಗಾಲ ಸಂದರ್ಭದಲ್ಲಿ ಮೀನುಗಾರಿಕೆಗೆ ಬ್ಯಾನ್ ಇದ್ದರೋ ಸಹ ಧ್ಯರ್ಯ ಮಾಡಿ ಜನ ಹೋಗ್ತಾ ಇದ್ದಾರೆ, ಈ ಬಗ್ಗೆ ಇಲಾಖೆ ಹಾಗು ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು , ಎಷ್ಟೇ ಲಾಭಇದ್ರೋ ಜೀವಕ್ಕಿಂದ ದೊಡ್ಡ ಲಾಭ ಮತ್ತೊಂದಿಲ್ಲ, ಪೊಲೀಸ್ ಅಧಿಕಾರಿಗಳ ಹತ್ತಿರ ಮಾತಾಡಿದ್ದೇನೆ, ಶುಕ್ರವಾರ ಮಂತ್ರಿಗಳ ಜೊತೆ ಭೇಟಿ ಕೊಟ್ಟು ನಾಪತ್ತೆಯಾದ ಮೀನುಗಾರರ ಕುಟುಂಬಕ್ಕೆ ಪರಾರಿಹರ ಕೊಡುವ ಪ್ರಯತ್ನ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.

    ಮೀನುಗಾರರು ನಿಷೇಧದ ಅವಧಿಯನ್ನು ಪಾಲಿಸಬೇಕೆಂದು ಮತ್ತು ಈ ಅವಧಿಯಲ್ಲಿ ಮೀನುಗಾರಿಕೆಗೆ ಹೋಗದಂತೆ ಅವರು ವಿನಂತಿಸಿದ್ದಾರೆ.

    ಇಂದು ಬೆಳಗ್ಗೆ ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಅಲೆಗಳ ಅಬ್ಬರಕ್ಕೆ ಸಿಲುಕಿ ಮಗುಚಿಬಿದ್ದ ಪರಿಣಾಮ ಮೂವರು ಮೀನುಗಾರರು ನಾಪತ್ತೆಯಾಗಿದ್ದಾರೆ.

    ಗಂಗೊಳ್ಳಿ ಸೀವಾಕ್ ಬಳಿ ಈ ದುರ್ಘಟನೆ ನಡೆದಿದ್ದು, ಓರ್ವ ಮೀನುಗಾರನನ್ನು ರಕ್ಷಿಸಲಾಗಿದೆ.

    ಸುರೇಶ್ ಖಾರ್ವಿ, ಜಗನ್ನಾಥ್ ಖಾರ್ವಿ ಮತ್ತು ಲೋಹಿತ್ ಖಾರ್ವಿ ನಾಪತ್ತೆಯಾದ ಮೀನುಗಾರರು. ಸಂತೋಷ್ ಖಾರ್ವಿ ಎನ್ನುವವರನ್ನು ಬೇರೊಂದು ಬೋಟ್ ನವರು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.

    ಸುರೇಶ ಖಾರ್ವಿ ಮಾಲಕತ್ವದ ದೋಣಿಯಲ್ಲಿ ಮಂಗಳವಾರ ಬೆಳಗ್ಗೆ ನಾಲ್ವರು ಮೀನುಗಾರರು ಮೀನುಗಾರಿಕೆ ಹೊರಟಿದ್ದರು. ಈ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿದ ದೋಣಿ ಮಗುಚಿ ಬಿದ್ದಿದೆ. ಈ ವೇಳೆ ಸಂತೋಷ್ ಖಾರ್ವಿ ಈಜಿ ಬೇರೊಂದು ದೋಣಿ ತಲುಪಿದ್ದರೆ, ಉಳಿದ ಮೂವರು ಮೀನುಗಾರರು ಈತನಕ ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ಪೊಲೀಸರು, ಕರಾವಳಿ ಕಾವಲು ಪಡೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

  • ಸಂಘಟನೆಯ ಅಧ್ಯಕ್ಷೆ ಎಂದು ಸಾಲ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂ. ವಂಚನೆ

    ಕೋಟ, ಜುಲೈ 15, 2025: ತಾನು ಚಾಲೆಂಜಿಗ್‌ ಪೌಂಡೇಶನ್‌ ಸಂಸ್ಥೆಯ ಸದಸ್ಯೆಯಾಗಿದ್ದು ಹಾಗೂ ದಲಿತ ಸಂಘ (ಭೀಮ ಘರ್ಜನೆ) ಸಂಘಟನೆಯ ಅಧ್ಯಕ್ಷೆಯಾಗಿದ್ದಾಳೆ ಎಂದು ದಾವೆ ಎತ್ತಿ ಇಬ್ಬರು ಮಹಿಳೆಯರಿಂದ ಹಣ ಮತ್ತು ಚಿನ್ನಾಭರಣ ಪಡೆದು ವಾಪಸ್ ನೀಡದೇ ವಂಚನೆ ಮಾಡಿರುವ ಘಟನೆ ಬ್ರಹ್ಮಾವರದ ಬಿಲ್ಲಾಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಆರೋಪಿ ಸುಶೀಲ ಎಂಬ ಮಹಿಳೆ, ತನ್ನ ಪಕ್ಕದ ಮನೆಯ ಜಲಜ ಎಂಬವರ ಬಳಿ ತಾನು ಚಾಲೆಂಜಿಗ್‌ ಪೌಂಡೇಶನ್‌ ಸದಸ್ಯೆಯಾಗಿದ್ದು ಮತ್ತು ದಲಿತ ಸಂಘದ ಅಧ್ಯಕ್ಷೆಯೂ ಆಗಿದ್ದು, ಹಣದ ಅವಶ್ಯಕತೆ ಇದೆ ಎಂದು ಹೇಳಿ 15 ಗ್ರಾಂ ತೂಕದ ಎರಡು ಚಿನ್ನದ ಬಳೆಗಳು, 10 ಗ್ರಾಂ ತೂಕದ ಒಂದು ಕಿವಿ ಓಲೆ ಮತ್ತು ಮಾಟೆಯನ್ನು ಪಡೆದಿದ್ದಾಳೆ. ಇದಲ್ಲದೇ, 5 ಗ್ರಾಂ ತೂಕದ ಚಿನ್ನದ ಸರವನ್ನು ಶಿರೂರು ಮೂರು ಕೈಯಲ್ಲಿರುವ ಮಲ್ಲಿಕಾರ್ಜುನ ಕೋ-ಆಪರೇಟಿವ್ ಸೊಸೈಟಿಯಲ್ಲಿ ಅಡಮಾನ ಮಾಡಿಸಿ ₹36,000, ಜಲಜರ ವಿಜಯ ಬ್ಯಾಂಕ್ ಖಾತೆಯಿಂದ ₹60,000 ಮತ್ತು ಪೋಸ್ಟ್ ಆಫೀಸ್ ಖಾತೆಯಿಂದ ₹80,000 ಸೇರಿ ಒಟ್ಟು ₹1,76,000 ನಗದು ಹಣವನ್ನು ವಂಚನೆಯ ಮೂಲಕ ಪಡೆದಿದ್ದಾಳೆ. ಮೇ 17, 2024ರಂದು ಜಲಜ ಅವರ ಮಗಾಳು ಜ್ಯೋತಿ ಸುಶೀಲನ ಬಳಿ ತಾಯಿಯ ಒಡವೆ ಮತ್ತು ಹಣ ಕೇಳಿದಾಗ, ಆಕೆ ತನ್ನ ಸ್ನೇಹಿತರ ಹೆಸರಿನಲ್ಲಿ ಬ್ರಹ್ಮಾವರದ ರಾಮಕೃಷ್ಣ ಮತ್ತು ಎಂಸಿಸಿ ಸೊಸೈಟಿಗಳಲ್ಲಿ ಅಡಮಾನ ಮಾಡಿದ್ದು ಎಂದು ಸಮರ್ಥಿಸಿಕೊಂಡು, ದಲಿತ ಮಹಿಳೆ ಎಂದು ಜಾತಿ ನಿಂದನೆಯ ಆರೋಪ ಎತ್ತಿ ಕೇಸ್ ದಾಖಲಿಸುವ ಬೆದರಿಕೆಯಿಂದ ₹1,20,000 ಮೌಲ್ಯದ ಚಿನ್ನಾಭರಣ ಮತ್ತು ಹಣವನ್ನು ವಾಪಸ್ ನೀಡಲು ನಿರಾಕರಿಸಿದ್ದಾಳೆ.

    ಇದೇ ರೀತಿ, ಗ್ರಾಮದ ಜಯಲಕ್ಷ್ಮೀ ಎಂಬ ಮಹಿಳೆಯನ್ನು ಗುರಿಯಾಗಿಸಿಕೊಂಡು, ಸೊಸೈಟಿಯಲ್ಲಿ ಹಣ ಡೆಪಾಜಿಟ್ ಮಾಡಿದರೆ ಹೆಚ್ಚು ಲಾಭ ಮತ್ತು ಲೋನ್ ಕೊಡಿಸುವ ಭರವಸೆ ನೀಡಿ ₹1,20,000 ಮತ್ತು ₹2,00,000 ಸೇರಿ ಒಟ್ಟು ₹3,20,000 ನಗದು ಹಣ ಪಡೆದಿದ್ದಾಳೆ. ಇದಲ್ಲದೇ, ₹16,00,000 ಲೋನ್ ಒದಗಿಸುವುದಾಗಿ ನಂಬಿಸಿ 30 ಗ್ರಾಂ ತೂಕದ ಚಿನ್ನದ ಕರಿಮಣಿ ಸರ, ಒಂದು ಜೋಡಿ ಬೆಂಡೋಲೆ ಮತ್ತು ಮಾಟೆಯನ್ನು (ಅಂದಾಜು ₹1,20,000 ಮೌಲ್ಯ) ಪಡೆದು ವಾಪಸ್ ನೀಡದೇ ವಂಚನೆ ಮಾಡಿದ್ದಾಳೆ. ಹೆಚ್ಚುವರಿ ಹಣ ಕೊಡಿಸುವಂತೆ ಒತ್ತಾಯಿಸಿ, ಚಿನ್ನಾಭರಣಗಳನ್ನು ಅಡಮಾನ ಮಾಡಿಸಿ ಲೋನ್ ಪಡೆದು ಸಂಸ್ಥೆಗೆ ಕಟ್ಟುವುದಾಗಿ ಹೇಳಿ ಬೆದರಿಕೆ ಹಾಕಿದ್ದಾಳೆ. ವಿಚಾರಣೆಯಲ್ಲಿ ಜಾತಿ ನಿಂದನೆಯ ಆರೋಪ ಎತ್ತಿ ಅವಾಚ್ಯ ಶಬ್ದಗಳಿಂದ ಬಗೆದಿದ್ದಾಳೆ.

    ಈ ಎರಡೂ ಪ್ರತ್ಯೇಕ ಪ್ರಕರಣಗಳ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.