ಉಡುಪಿ, ಜುಲೈ 21, 2025: ಗಂಭೀರ ಸ್ಥಿತಿಯಲ್ಲಿದ್ದ ಅಪರಿಚಿತ ವ್ಯಕ್ತಿಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ರಕ್ಷಿಸಿ, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿರುವ ಘಟನೆ ರವಿವಾರ ನಡೆದಿದೆ. ರಕ್ಷಿಸಲ್ಪಟ್ಟ ರೋಗಿಯು ಹೆಸರು ಸುರೇಶ (49ವ) ತಂದೆ ದುರ್ಗಾ ನಾಯ್ಕ್ ಹಾವೇರಿಯ ನಿವಾಸಿ ಎಂದು ಹೇಳಿಕೊಂಡಿದ್ದಾನೆ. ವಾರಸುದಾರರು ಉಡುಪಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಆದರ್ಶ್ ಆಸ್ಪತ್ರೆಯ ಸನಿಹದ ಅಂಗಡಿ ಜಗುಲಿಯಲ್ಲಿ ರೋಗಿಯು ಚಳಿಜ್ವರದಿಂದ ಬಳಲುತ್ತ, ಚಿಕಿತ್ಸೆ ಪಡೆಯಲು ಅಸಹಾಯಕರಾಗಿ ಮಲಗಿಕೊಂಡಿದ್ದರು. ಗಮನಿಸಿದ ನಗರ ಪೋಲಿಸ್ ಠಾಣೆಯ ಗಸ್ತು ವಾಹನದ ಚಾಲಕ ಸಕತೋಷ್‌ರಾವ್ ಒಳಕಾಡುವರ ಗಮನಕ್ಕೆ ತಂದಿದ್ದರು,ಜಗದೀಶ್ ಸಹಕರಿಸಿದರು.
ಕೋಟ, ಜುಲೈ 16, 2025: ಬ್ರಹ್ಮಾವರ ತಾಲೂಕು ಬಾಳ್ಕುದ್ರು ಗ್ರಾಮದ ಹಂಗಾರಕಟ್ಟೆ ಹೊಳೆಯಲ್ಲಿ ಲಂಗರು ಹಾಕಿ ನಿಲ್ಲಿಸಲಾಗಿದ್ದ ಅಸ್ಸಿಲ್ಹಾ (ASSILAH) ಶಿಪ್‌ಗೆ ಆಳವಡಿಸಲಾಗಿದ್ದ ರೆಸ್ಕ್ಯೂ ಬೋಟ್‌ನ ಹೊಸ ಇಂಜಿನ್ ಕಳವಾಗಿದೆ. ದಿನಾಂಕ 13/07/2025 ರಾತ್ರಿ 9:30 ಗಂಟೆಯಿಂದ ದಿನಾಂಕ 15/07/2025 ರ ಬೆಳಿಗ್ಗೆ 8:00 ಗಂಟೆಯವರೆಗೆ ಯಾರೋ ತಿಳಿಯದವರು SUZUKI DT 15 AL -15HP 2STROKE TILLER MODEL WITH PROPELLER ಇಂಜಿನ್‌ನ ಇಂಧನ ಪೈಪ್ ತುಂಡು ಮಾಡಿ ಕಳವು ಮಾಡಿಕೊಂಡು ಹೋಗಿದ್ದಾರೆ.
ಈ ಸಂಬಂಧ ಹಂದಾಡಿ ಗ್ರಾಮದ ಜೆ.ಬಿ. ಪ್ರಕಾಶ (52) ಅವರು ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣವನ್ನು ಅಪರಾಧ ಕ್ರಮಾಂಕ 132/2025 ಕಲಂ 305 BNS ರಡಿ ದಾಖಲಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಘಟನೆಯ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಕುಂದಾಪುರ: ಸಾರ್ವಜನಿಕ ಗಣೇಶೋತ್ಸವ ಸಮಿತಿ ವಂಡ್ಸೆ ಇದರ 23ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ವೆಂಕಟೇಶ ಶೆಟ್ಟಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಅಶ್ವಿನ್ ಮೇಲ್ಮನೆ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಗಿರೀಶ ಎನ್.ನಾಯ್ಕ್ ಸಪ್ತಗಿರಿ ವಂಡ್ಸೆ, ಜೊತೆ ಕಾರ್ಯದರ್ಶಿಯಾಗಿ ನಾಗರಾಜ ಪೂಜಾರಿ, ಖಜಾಂಚಿಯಾಗಿ ವಿ.ಕೆ ಶಿವರಾಮ ಶೆಟ್ಟಿ, ಉಪಾಧ್ಯಕ್ಷರಾಗಿ ಸದಾನಂದ ಆಚಾರ್ಯ, ಪ್ರತಾಪಕುಮಾರ ಶೆಟ್ಟಿ, ಮಣಿಕಂಠ ಪೂಜಾರಿ, ಜಯರಾಮ ಶೆಟ್ಟಿ ಬೆಳ್ವಾಣ, ಸಂದೇಶ ಶೆಟ್ಟಿ ಅಡಿಕೆಕೊಡ್ಲು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಿಠಲ್ ಆಚಾರ್ಯ, ಜೊತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅಭಿಷೇಕ ಮೇಲ್ಮನೆ, ಕ್ರೀಡಾ ಕಾರ್ಯದರ್ಶಿಯಾಗಿ ಗುರುರಾಜ ಗಾಣಿಗ, ಜೊತೆ ಕ್ರೀಡಾಕಾರ್ಯದರ್ಶಿಯಾಗಿ ಶಿವಪ್ರಸಾದ್ ಜಡ್ಡು, ಸಂಘಟನಾ ಕಾರ್ಯದರ್ಶಿಗಳಾಗಿ ಸತೀಶ ಆರ್.ಚಂದನ್, ದಿವಾಕರ (ಸುಜಿ), ಮಹೇಶ ಗಾಣಿಗ, ಸುಶಾಂತ ಎನ್, ಶಶಿಧರ ಆಚಾರ್ಯ, ಶಂಕರ ಆಚಾರ್ಯ ನಾಡಗಡಿ, ಸುಧೀಂದ್ರ ಆಚಾರ್ಯ, ರಮೇಶ ಪೂಜಾರಿ ಬಳಿಹಿತ್ಲು, ಲೆಕ್ಕಪರಿಶೋಧಕರು-ಶಂಕರ ಆಚಾರ್ಯ ಆತ್ರಾಡಿ, ಗೌರವ ಸಲಹೆಗಾರರು-ಸಂಜೀವ ಪೂಜಾರಿ, ಶಶಿಧರ ಶೆಟ್ಟಿ ಪಠೇಲರಮನೆ, ಉದಯಕುಮಾರ್ ಶೆಟ್ಟಿ, ಶ್ರೀನಿವಾಸ ಪೂಜಾರಿ, ವಿ.ಎಂ ಸುಧಾಕರ, ಗುಂಡು ಪೂಜಾರಿ, ಕರುಣಾಕರ ಶೆಟ್ಟಿ, ಉದಯ ಕೆ.ನಾಯ್ಕ್, ಆನಂದ ನಾಯ್ಕ್ ನ್ಯಾಗಳಮನೆ, ರುದ್ರಯ್ಯ ಆಚಾರ್ಯ, ಪ್ರಕಾಶ್ ಪೂಜಾರಿ ಜಡ್ಡು, ಶಶಿಧರ ಶೆಟ್ಟಿ ಕೊರಾಡಿಮನೆ, ಲಕ್ಷ್ಮೀನಾರಾಯಣ ಆಚಾರ್ಯ, ಸಮಿತಿ ಸದಸ್ಯರಾಗಿ ಕೃಷ್ಣ ಪೂಜಾರಿ ವಂಡ್ಸೆ, ಶ್ರೀಕಾಂತ ಲಿಂಗಿಮನೆ, ಮಣಿಂಧರ ಗಾಣಿಗ, ಭಾಗ್ಯರಾಜ ಆಚಾರ್ಯ, ಪ್ರಸಾದ್ ಆಚಾರ್ಯ ಆತ್ರಾಡಿ, ಅನಿಲ್ ಹರವರಿ, ದಿನೇಶ ಬಳಗೇರಿ, ಪ್ರಜೇತ್ ಆತ್ರಾಡಿ ಆಯ್ಕೆಯಾಗಿದ್ದಾರೆ.
ಗಣೇಶೋತ್ಸವ ಆಗಸ್ಟ್ 27 ಬುಧವಾರ ಮತ್ತು 28 ಗುರುವಾರ ನಡೆಯಲಿದೆ.
ಉಡುಪಿ, ಜುಲೈ 15, 2025: ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣ ಅಧಿಕಾರಿ ವ್ಯಾಪ್ತಿಯ 108 ಆಂಬುಲೆನ್ಸ್ ವಾಹನಗಳನ್ನು ನಿರುಪಯುಕ್ತಗೊಳಿಸಿ, ವಿಲೇವಾರಿ ಮಾಡುವ ಬಗ್ಗೆ ಜುಲೈ 25 ರಂದು ಬೆಳಗ್ಗೆ 10 ಗಂಟೆಗೆ ಉಡುಪಿ ನಗರದ ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣ ಅಧಿಕಾರಿಯವರ ಕಚೇರಿ ಆವರಣದಲ್ಲಿ ಬಹಿರಂಗ ಹರಾಜು ನಡೆಯಲಿದ್ದು, ಆಸಕ್ತರು ಭಾಗವಹಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಕಛೇರಿ ಪ್ರಕಟಣೆ ತಿಳಿಸಿದೆ.
ಮೇಲಿನ ಚಿತ್ರವು ಉಲ್ಲೇಖಕ್ಕಾಗಿ ಮಾತ್ರ ಮತ್ತು ಹರಾಜಿನಲ್ಲಿ ಉಲ್ಲೇಖಿಸಲಾದ ಚಿತ್ರವಲ್ಲ.
ಉಡುಪಿ, ಜುಲೈ 15, 2025: ಭಾರತೀಯ ಹವಾಮಾನ ಇಲಾಖೆಯ ತಿರುವನಂತಪುರ ಕೇಂದ್ರವು ನೀಡಿರುವ ಮುನ್ಸೂಚನೆಯ ಪ್ರಕಾರ, ಲಕ್ಷದ್ವೀಪ, ಕೇರಳ ಮತ್ತು ಕರ್ನಾಟಕ ವ್ಯಾಪ್ತಿಯ ಅರಬ್ಬಿ ಸಮುದ್ರದಲ್ಲಿ 40-50 ಕಿ.ಮೀ. ಪ್ರತಿ ಗಂಟೆಯ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದ್ದು, ಕೆಲವೊಮ್ಮೆ ಗಂಟೆಗೆ 60 ಕಿ.ಮೀ. ವೇಗವೂ ದಾಟಬಹುದು. ಈ ಹಿನ್ನೆಲೆಯಲ್ಲಿ ಜುಲೈ 18ರವರೆಗೆ ಕರಾವಳಿ ತೀರದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಸಾಂಪ್ರದಾಯಿಕ ಮೀನುಗಾರರು ತಮ್ಮ ದೋಣಿ ಮತ್ತು ಬಲೆಗಳನ್ನು ದಡದಲ್ಲಿ ಸುರಕ್ಷಿತ ಸ್ಥಳದಲ್ಲಿ ಇರಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ನಾಡದೋಣಿ, ಸಣ್ಣ ಮತ್ತು ಮಧ್ಯಮ ಗಾತ್ರದ ದೋಣಿಗಳು ಮೀನುಗಾರಿಕೆಗೆ ತೆರಳದಂತೆ ಎಚ್ಚರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮೀನುಗಾರಿಕೆಗೆ ತೆರಳುವಾಗ ಕಡ್ಡಾಯವಾಗಿ ಜೀವರಕ್ಷಕ ಸಾಧನಗಳನ್ನು ಬಳಸಬೇಕು ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರಾವಳಿಯ ಬಂದರುಗಳಾದ ಕಾರವಾರ, ಮಂಗಳೂರು, ಪಣಂಬೂರು, ಹೊನ್ನಾವರ, ಭಟ್ಕಳ, ಗಂಗೊಳ್ಳಿ, ಮತ್ತು ಮಾಲ್ಪೆಯಲ್ಲಿ ಸ್ಥಳೀಯವಾಗಿ ಸಂಖ್ಯೆ 2 ಎಚ್ಚರಿಕೆಯ ಸೂಚನೆಯನ್ನು ಹಾರಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ತೀವ್ರ ಮಳೆ: ಇಂದು ಬೆಳಗ್ಗೆ 8:30ರವರೆಗೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ 74.9ಮಿ.ಮೀ. ಮಳೆ ಜಿಲ್ಲೆಯಲ್ಲಿ ಬಿದ್ದಿದೆ. ಕುಂದಾಪುರದಲ್ಲಿ ಅತ್ಯಧಿಕ 97.4ಮಿ.ಮೀ. ಮಳೆಯಾದರೆ, ಬ್ರಹ್ಮಾವರದಲ್ಲಿ 93.9ಮಿ.ಮೀ.ಮಳೆ ಬಿದ್ದಿದೆ. ಹೆಬ್ರಿಯಲ್ಲಿ 81ಮಿ.ಮೀ.ಮಳೆಯಾಗಿದೆ.
ಹಾನಿ ವರದಿ: ಇಂದು ಎರಡು ಮನೆಗಳಿಗೆ ಹಾನಿಯಾಗಿದ್ದು, ಕಾಪು ತಾಲೂಕಿನ ಕಳತ್ತೂರಿನ ಗೋಪ ಮುಖರಿ ಅವರ ಮನೆಯ ಮೇಲೆ ಮರ ಬಿದ್ದು ₹20,000ರಷ್ಟು ಹಾನಿ ಉಂಟಾಗಿದ್ದರೆ, ಕುಂದಾಪುರ ತಾಲೂಕಿನ ಮೊಳಹಳ್ಳಿಯ ಸಾದಮ್ಮ ಶೆಟ್ಟಿ ಅವರ ಮನೆಯ ಮೇಲೆ ಮರ ಬಿದ್ದು ₹25,000ರಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಕುಂದಾಪುರ, ಜುಲೈ 15, 2025: ಕುಂದಾಪುರ-ಕೋಟೇಶ್ವರ-ಬಿದ್ಕಲ್‌ಕಟ್ಟೆ-ಹಾಲಾಡಿ-ಅಮಾಸೆಬೈಲು ಮಾರ್ಗದಲ್ಲಿ ತೊಂಬಟ್ಟಿಗೆ ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರಿ ಬಸ್ ಸೇವೆಯನ್ನು ಇಂದಿನಿಂದ ಪುನರಾರಂಭಿಸಲಾಗಿದೆ.
ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಇತ್ತೀಚೆಗೆ ಬಿಡುಗಡೆ ಮಾಡಿದ ಸುದ್ದಿಯಲ್ಲಿ, ಕುಂದಾಪುರ-ತೊಂಬಟ್ಟಗೆ ಮಾರ್ಗದಲ್ಲಿ ಸಾರಿಗೆ ಸೇವೆಯ ಕೊರತೆಯ ಬಗ್ಗೆ ವಿಧಾನಸಭೆಯಲ್ಲಿ ಸಾರಿಗೆ ಸಚಿವರೊಂದಿಗೆ ಚರ್ಚಿಸಿ, ಈ ಸೇವೆಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದರು. ಈ ಸಂದರ್ಭದಲ್ಲಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಪ್ರತಿದಿನ ಬೆಳಗ್ಗೆ 7:30 ಮತ್ತು ಸಾಯಂಕಾಲ 4:45ರಲ್ಲಿ ಸಾರಿಗೆ ನಿಗಮದ ಬಸ್ ಓಡಿಸುವ ಆದೇಶ ಪತ್ರವನ್ನು ಜಾರಿಗೆ ತರಲಾಗಿದೆ. ಈ ಸೇವೆಯಿಂದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ತಮ್ಮ ಪ್ರಯಾಣ ಸುಗಮವಾಗಲಿದೆ ಎಂದು ತಿಳಿಸಿದ್ದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಕುಂದಾಪುರ ಘಟಕವು ಜುಲೈ 12, 2025ರಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ ಶೆಟ್ಟರಿಗೆ ಪತ್ರ ಬರೆದು, ಜುಲೈ 15, 2025ರಿಂದ ಈ ಮಾರ್ಗದಲ್ಲಿ ಬಸ್ ಸೇವೆ ಆರಂಭವಾಗಲಿದೆ ಎಂದು ಘೋಷಿಸಿತ್ತು.
ಕೋಟ, ಜುಲೈ 15, 2025: ತಾನು ಚಾಲೆಂಜಿಗ್ ಪೌಂಡೇಶನ್ ಸಂಸ್ಥೆಯ ಸದಸ್ಯೆಯಾಗಿದ್ದು ಹಾಗೂ ದಲಿತ ಸಂಘ (ಭೀಮ ಘರ್ಜನೆ) ಸಂಘಟನೆಯ ಅಧ್ಯಕ್ಷೆಯಾಗಿದ್ದಾಳೆ ಎಂದು ದಾವೆ ಎತ್ತಿ ಇಬ್ಬರು ಮಹಿಳೆಯರಿಂದ ಹಣ ಮತ್ತು ಚಿನ್ನಾಭರಣ ಪಡೆದು ವಾಪಸ್ ನೀಡದೇ ವಂಚನೆ ಮಾಡಿರುವ ಘಟನೆ ಬ್ರಹ್ಮಾವರದ ಬಿಲ್ಲಾಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಸುಶೀಲ ಎಂಬ ಮಹಿಳೆ, ತನ್ನ ಪಕ್ಕದ ಮನೆಯ ಜಲಜ ಎಂಬವರ ಬಳಿ ತಾನು ಚಾಲೆಂಜಿಗ್ ಪೌಂಡೇಶನ್ ಸದಸ್ಯೆಯಾಗಿದ್ದು ಮತ್ತು ದಲಿತ ಸಂಘದ ಅಧ್ಯಕ್ಷೆಯೂ ಆಗಿದ್ದು, ಹಣದ ಅವಶ್ಯಕತೆ ಇದೆ ಎಂದು ಹೇಳಿ 15 ಗ್ರಾಂ ತೂಕದ ಎರಡು ಚಿನ್ನದ ಬಳೆಗಳು, 10 ಗ್ರಾಂ ತೂಕದ ಒಂದು ಕಿವಿ ಓಲೆ ಮತ್ತು ಮಾಟೆಯನ್ನು ಪಡೆದಿದ್ದಾಳೆ. ಇದಲ್ಲದೇ, 5 ಗ್ರಾಂ ತೂಕದ ಚಿನ್ನದ ಸರವನ್ನು ಶಿರೂರು ಮೂರು ಕೈಯಲ್ಲಿರುವ ಮಲ್ಲಿಕಾರ್ಜುನ ಕೋ-ಆಪರೇಟಿವ್ ಸೊಸೈಟಿಯಲ್ಲಿ ಅಡಮಾನ ಮಾಡಿಸಿ ₹36,000, ಜಲಜರ ವಿಜಯ ಬ್ಯಾಂಕ್ ಖಾತೆಯಿಂದ ₹60,000 ಮತ್ತು ಪೋಸ್ಟ್ ಆಫೀಸ್ ಖಾತೆಯಿಂದ ₹80,000 ಸೇರಿ ಒಟ್ಟು ₹1,76,000 ನಗದು ಹಣವನ್ನು ವಂಚನೆಯ ಮೂಲಕ ಪಡೆದಿದ್ದಾಳೆ. ಮೇ 17, 2024ರಂದು ಜಲಜ ಅವರ ಮಗಾಳು ಜ್ಯೋತಿ ಸುಶೀಲನ ಬಳಿ ತಾಯಿಯ ಒಡವೆ ಮತ್ತು ಹಣ ಕೇಳಿದಾಗ, ಆಕೆ ತನ್ನ ಸ್ನೇಹಿತರ ಹೆಸರಿನಲ್ಲಿ ಬ್ರಹ್ಮಾವರದ ರಾಮಕೃಷ್ಣ ಮತ್ತು ಎಂಸಿಸಿ ಸೊಸೈಟಿಗಳಲ್ಲಿ ಅಡಮಾನ ಮಾಡಿದ್ದು ಎಂದು ಸಮರ್ಥಿಸಿಕೊಂಡು, ದಲಿತ ಮಹಿಳೆ ಎಂದು ಜಾತಿ ನಿಂದನೆಯ ಆರೋಪ ಎತ್ತಿ ಕೇಸ್ ದಾಖಲಿಸುವ ಬೆದರಿಕೆಯಿಂದ ₹1,20,000 ಮೌಲ್ಯದ ಚಿನ್ನಾಭರಣ ಮತ್ತು ಹಣವನ್ನು ವಾಪಸ್ ನೀಡಲು ನಿರಾಕರಿಸಿದ್ದಾಳೆ.
ಇದೇ ರೀತಿ, ಗ್ರಾಮದ ಜಯಲಕ್ಷ್ಮೀ ಎಂಬ ಮಹಿಳೆಯನ್ನು ಗುರಿಯಾಗಿಸಿಕೊಂಡು, ಸೊಸೈಟಿಯಲ್ಲಿ ಹಣ ಡೆಪಾಜಿಟ್ ಮಾಡಿದರೆ ಹೆಚ್ಚು ಲಾಭ ಮತ್ತು ಲೋನ್ ಕೊಡಿಸುವ ಭರವಸೆ ನೀಡಿ ₹1,20,000 ಮತ್ತು ₹2,00,000 ಸೇರಿ ಒಟ್ಟು ₹3,20,000 ನಗದು ಹಣ ಪಡೆದಿದ್ದಾಳೆ. ಇದಲ್ಲದೇ, ₹16,00,000 ಲೋನ್ ಒದಗಿಸುವುದಾಗಿ ನಂಬಿಸಿ 30 ಗ್ರಾಂ ತೂಕದ ಚಿನ್ನದ ಕರಿಮಣಿ ಸರ, ಒಂದು ಜೋಡಿ ಬೆಂಡೋಲೆ ಮತ್ತು ಮಾಟೆಯನ್ನು (ಅಂದಾಜು ₹1,20,000 ಮೌಲ್ಯ) ಪಡೆದು ವಾಪಸ್ ನೀಡದೇ ವಂಚನೆ ಮಾಡಿದ್ದಾಳೆ. ಹೆಚ್ಚುವರಿ ಹಣ ಕೊಡಿಸುವಂತೆ ಒತ್ತಾಯಿಸಿ, ಚಿನ್ನಾಭರಣಗಳನ್ನು ಅಡಮಾನ ಮಾಡಿಸಿ ಲೋನ್ ಪಡೆದು ಸಂಸ್ಥೆಗೆ ಕಟ್ಟುವುದಾಗಿ ಹೇಳಿ ಬೆದರಿಕೆ ಹಾಕಿದ್ದಾಳೆ. ವಿಚಾರಣೆಯಲ್ಲಿ ಜಾತಿ ನಿಂದನೆಯ ಆರೋಪ ಎತ್ತಿ ಅವಾಚ್ಯ ಶಬ್ದಗಳಿಂದ ಬಗೆದಿದ್ದಾಳೆ.
ಈ ಎರಡೂ ಪ್ರತ್ಯೇಕ ಪ್ರಕರಣಗಳ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.
ಗಂಗೊಳ್ಳಿ, ಜುಲೈ 15, 2025: ಇಂದು ನಾಡದೋಣಿ ಮಗುಚಿ ನೀರು ಪಾಲಾಗಿರುವ ಮೂವರು ಮೀನುಗಾರರ ಪತ್ತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಘಟನೆ ತಿಳಿದ ತಕ್ಷಣವೇ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದ ಸಚಿವೆ, ಮೀನುಗಾರರ ಪತ್ತೆಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ಮೂವರನ್ನು ಸುರಕ್ಷಿತವಾಗಿ ಕರೆತರಲು ಕಾರ್ಯಾಚರಣೆ ನಡೆಸುವಂತೆ ಕರಾವಳಿ ಕಾವಲು ಪಡೆಗೆ ಸೂಚನೆ ನೀಡಿದ್ದಾರೆ.
ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ವಹಿಸಬೇಕು. ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸಚಿವೆ ಹೆಬ್ಬಾಳ್ಕರ್ ಸೂಚನೆ ನೀಡಿದ್ದಾರೆ.
ಇಂದು ಬೆಳಗ್ಗೆ ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಅಲೆಗಳ ಅಬ್ಬರಕ್ಕೆ ಸಿಲುಕಿ ಮಗುಚಿಬಿದ್ದ ಪರಿಣಾಮ ಮೂವರು ಮೀನುಗಾರರು ನಾಪತ್ತೆಯಾಗಿದ್ದಾರೆ.
ಲಕ್ಷ್ಮೀ ಹೆಬ್ಬಾಳಕರ್
ಉಡುಪಿಯ ಬೈಂದೂರಿನ ಗಂಗೊಳ್ಳಿಯಲ್ಲಿ ಮೀನುಗಾರಿಕೆಯ ದೋಣಿ ಮುಗುಚಿ ಮೂವರು ಮೀನುಗಾರರು ನೀರಿನಲ್ಲಿ ನಾಪತ್ತೆಯಾಗಿರುವ ಸುದ್ದಿ ತಿಳಿದು ಸಂಕಟವಾಯಿತು. ಆದಷ್ಟು ಬೇಗ ಮೀನುಗಾರರು ಸುರಕ್ಷಿತವಾಗಿ ಹಾಗೂ ಜೀವಂತವಾಗಿ ಮರಳಿ ಬರಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ನಾಪತ್ತೆಯಾದವರ ಪತ್ತೆಗೆ ಚುರುಕಾಗಿ ಕಾರ್ಯಾಚರಣೆ ನಡೆಸುವಂತೆ ಕರಾವಳಿ ಕಾವಲು ಪಡೆಗೆ ಮತ್ತು ಜಿಲ್ಲಾಡಳಿತಕ್ಕೆ ಈಗಾಗಲೇ ಸೂಚನೆ ನೀಡಲಾಗಿದೆ. – ಲಕ್ಷ್ಮೀ ಹೆಬ್ಬಾಳಕರ್
ಗಂಗೊಳ್ಳಿ ಸೀವಾಕ್ ಬಳಿ ಈ ದುರ್ಘಟನೆ ನಡೆದಿದ್ದು, ಓರ್ವ ಮೀನುಗಾರನನ್ನು ರಕ್ಷಿಸಲಾಗಿದೆ.
ಸುರೇಶ್ ಖಾರ್ವಿ, ಜಗನ್ನಾಥ್ ಖಾರ್ವಿ ಮತ್ತು ರೋಹಿತ್ ಖಾರ್ವಿ ನಾಪತ್ತೆಯಾದ ಮೀನುಗಾರರು. ಸಂತೋಷ್ ಖಾರ್ವಿ ಎನ್ನುವವರನ್ನು ಬೇರೊಂದು ಬೋಟ್ ನವರು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.
ಸುರೇಶ ಖಾರ್ವಿ ಮಾಲಕತ್ವದ ದೋಣಿಯಲ್ಲಿ ಮಂಗಳವಾರ ಬೆಳಗ್ಗೆ ನಾಲ್ವರು ಮೀನುಗಾರರು ಮೀನುಗಾರಿಕೆ ಹೊರಟಿದ್ದರು. ಈ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿದ ದೋಣಿ ಮಗುಚಿ ಬಿದ್ದಿದೆ. ಈ ವೇಳೆ ಸಂತೋಷ್ ಖಾರ್ವಿ ಈಜಿ ಬೇರೊಂದು ದೋಣಿ ತಲುಪಿದ್ದರೆ, ಉಳಿದ ಮೂವರು ಮೀನುಗಾರರು ಈತನಕ ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ಪೊಲೀಸರು, ಕರಾವಳಿ ಕಾವಲು ಪಡೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಉಡುಪಿ, ಜುಲೈ 15, 2025: ಉಡುಪಿ-ಮಣಿಪಾಲ ಹೆದ್ದಾರಿಯಲ್ಲಿ ಎಂ.ಜಿ.ಎಂ. ಕಾಲೇಜ್ ಸಮೀಪ ಎರಡು ಎಕ್ಸ್‌ಪ್ರೆಸ್ ಬಸ್ಸುಗಳು ಮುಖಾಮುಖಿ ಢಿಕ್ಕಿಯಾದ ಪರಿಣಾಮ ಹಲವಾರು ಪ್ರಯಾಣಿಕರಿಗೆ ಗಾಯವಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಮಣಿಪಾಲದಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಬಸ್ ಬ್ರೇಕ್ ಕಳೆದುಕೊಂಡು ಎದುರು ದಿಕ್ಕಿನಿಂದ ಬರುತ್ತಿದ್ದ ಮತ್ತೊಂದು ಖಾಸಗಿ ಎಕ್ಸ್‌ಪ್ರೆಸ್ ಬಸ್‌ಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.ಈ ಘರ್ಷಣೆಯಿಂದಾಗಿ ಎರಡೂ ವಾಹನಗಳಿಗೆ ಗಣನೀಯ ಹಾನಿ ಉಂಟಾಗಿದ್ದು, ಹೆದ್ದಾರಿಯ ಎರಡೂ ಬದಿಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಘಟನೆಯ ಸ್ಥಳಕ್ಕೆ ಉಡುಪಿ ಟ್ರಾಫಿಕ್ ಪೊಲೀಸರು ಧಾವಂತಾಗಿ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಿದ್ದಾರೆ. ಗಾಯಾಳುಗಳಿಗೆ ಆರೈಕೆ ಒದಗಿಸುವ ಕುರಿತು ಮತ್ತಷ್ಟು ಮಾಹಿತಿ ಇನ್ನಷ್ಟು ತನಿಖೆಯ ನಂತರ ತಿಳಿದುಬರುವ ಸಾಧ್ಯತೆ ಇದೆ.
ಕುಂದಾಪುರ: ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ನಾನು ಭಾರತೀಯ ಎನ್ನುವ ಧ್ಯೇಯವನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲಾ ಧರ್ಮಗಳೂ ಒಂದೇ ಎಂಬ ಸೌಹಾರ್ದತೆಯನ್ನು ಸಾರುವ ನಿಟ್ಟಿನಲ್ಲಿ ನಾವೆಲ್ಲ ಕೈಜೋಡಿಸಬೇಕಾಗಿದೆ. ಜಾತಿ, ಮತ, ಪಂಥಗಳ ಅಂತರಗಳನ್ನು ತೊರೆದು ಸೌಹಾರ್ದತೆಯೊಂದಿಗೆ ಸಾಗಬೇಕು ಎಂದು ಹಲಗೇರಿ ಜೋಗಿ ಮನೆಯ ಶ್ರೀ ವಸಂತನಾಥ ಗುರೂಜಿ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು ಕರಾವಳಿ ಕರ್ನಾಟಕದಲ್ಲಿ ಕೋಮು ಸೌಹಾರ್ದವನ್ನು ಬಲಪಡಿಸುವ ಉದ್ದೇಶದಿಂದ ಹೃದಯ ಹೃದಯಗಳನ್ನು ಬೆಸೆಯೋಣ ಎಂಬ ಧೈಯವಾಕ್ಯದೊಂದಿಗೆ ಹಮ್ಮಿಕೊಳ್ಳಲಾದ ’ಸೌಹಾರ್ದ ಸಂಚಾರ’ವನ್ನು ಸೋಮವಾರ ಕುಂದಾಪುರದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸೌಹಾರ್ದ ಸಂಚಾರಕ್ಕೆ ಚಾಲನೆ ನೀಡಿದ ಕರ್ನಾಟಕ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷ ಮೌಲಾನಾ ಶಾಫಿ ಸಅದಿ ಮಾತನಾಡಿ, ಪವಿತ್ರ ಕುರಾನ್ ಹಿಂಸೆಯನ್ನು ಆರಾಧಿಸುವುದಿಲ್ಲ. ಪೈಗಂಬರ್ ಜೀವನ ಚರಿತ್ರೆ ಯನ್ನು ಸರಿಯಾಗಿ ಅಧ್ಯಯನ ಮಾಡಿದ ಯಾವ ವ್ಯಕ್ತಿಯೂ ಧರ್ಮದ್ವೇಷ ಮಾಡಲು ಸಾಧ್ಯವಿಲ್ಲ. ಜಗತ್ತಿನ ಯಾವ ಧರ್ಮವೂ ಇನ್ನೊಂದು ಧರ್ಮವನ್ನು ಪ್ರೀತಿಸು ಎನ್ನುತ್ತದೆಯೇ ಹೊರತು ದ್ವೇಷಿಸಲು ಉಪದೇಶಿ ಸುವುದಿಲ್ಲ. ಎಲ್ಲಾ ಧರ್ಮದ ಸಾರ ಶಾಂತಿ ಸಾರುವುದೇ ಆಗಿದೆ ಎಂದು ಹೇಳಿದರು.
“ಪ್ರಸ್ತುತ ಕಾಲಘಟ್ಟದಲ್ಲಿ ಸೌಹಾರ್ದ ಸಂಚಾರ ಆರಂಭಿಸುವ ಸ್ಥಿತಿಗೆ ತಲುಪಿದ್ದು ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಯಬೇಕು. ಕುಂದಾಪುರ ತಾಲೂಕಿನ ಮಂದಿ ನೂರಾರು ವರ್ಷಗಳಿಂದ ಸೌಹಾದರ್ಯುತ ಜೀವನ ನಡೆಸುತ್ತಿದ್ದಾರೆ. ಎಲ್ಲಾ ಧರ್ಮದ ಹಬ್ಬ, ಹರಿದಿನಗಳಲ್ಲಿ, ಆಚರಣೆಗಳಲ್ಲಿ ಜನರು ಪರಸ್ಪರ ಬೆರೆ ಯುತ್ತಿದ್ದಾರೆ. ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಬಂದು ನೆಮ್ಮದಿ ಹಾಳಾಗಿದ್ದರೂ ಕೂಡ ನೈಜ್ಯ ಪರಂಪರೆಗೆ ಯಾವುದೇ ಸಮಸ್ಯೆಯಾಗಿಲ್ಲ”– ಶಶಿಧರ್ ಹೆಮ್ಮಾಡಿ, ಪ್ರಗತಿಪರ ಚಿಂತಕ
ಧರ್ಮಗುರು ರೆ.ಫಾ.ನೋವೆಲ್ ಬ್ರಹ್ಮಾವರ ಮಾತನಾಡಿ, ಕ್ರೈಸ್ತ ಮೆಷಿನರಿಗಳು ಕರಾವಳಿಯಲ್ಲಿ ಇಂದಿಗೂ ಯಾವುದೇ ಧರ್ಮ ಬೇದ ಮಾಡದೇ ಸಾಮಾಜಿಕ ಸೇವೆ ನೀಡುತ್ತಿದೆ. ಫಾದರ್ ಮುಲ್ಲರ್ ಆಸ್ಪತ್ರೆ, ಬಾಸೆಲ್ ಮಿಷನ್ ಹೆಂಚಿನ ಕಾರ್ಖಾನೆಗಳು, ಶಿಕ್ಷಣ ಸಂಸ್ಥೆಗಳು ಇಂದಿಗೂ ಕೊಡುಗೆಯಾಗಿ ಉಳಿದಿಲ್ಲ, ಅವು ಸಹೋದರತೆ, ನಂಬಿಕೆ, ವಿಶ್ವಾಸಗಳನ್ನು ಗಟ್ಟಿಗೊಳಿಸುವಲ್ಲಿ ತಮ್ಮದೇ ಕೊಡುಗೆ ನೀಡುತ್ತಿವೆ. ಯಾವ ರಾಜಕೀಯ ಪಕ್ಷಗಳು, ನಾಯಕರು ನಮ್ಮನ್ನು ಒಂದುಗೂಡಿಸಬೇಕಿತ್ತೋ ಅವೇ ನಮ್ಮನ್ನು ವಿಭಜಿಸಲು ಹುನ್ನಾರ ನಡೆಸುತ್ತಿರುವುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮಕ್ಕೆ ಮುನ್ನ ಕುಂದಾಪುರದ ಮುಖ್ಯ ಪೇಟೆಯಲ್ಲಿ ಶಾಂತಿ ಮೆರವಣಿಗೆ ನಡೆಯಿತು. ಮುಖ್ಯ ಅತಿಥಿಯಾಗಿ ಪತ್ರಕರ್ತ ಶಶಿಧರ ಹೆಮ್ಮಾಡಿ ಮಾತನಾಡಿದರು. ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದ ಅಧ್ಯಕ್ಷ ಬಶೀರ್ ಸಅದಿ ಬೆಂಗಳೂರು ಅಧ್ಯಕ್ಷತೆ ವಹಿಸಿದ್ದರು.
ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಹನೀಫ್ ಹಾಜಿ, ಸಹಬಾಳ್ವೆ ಕುಂದಾಪುರದ ರಾಮಕೃಷ್ಣ ಹೇರ್ಳೆ, ಸಿಪಿಐಎಂ ಪಕ್ಷದ ಮುಖಂಡರಾದ ಚಂದ್ರಶೇಖರ ದೇವಾಡಿಗ, ಮಹಾಬಲ, ಕುಂದಾಪುರ ಕ್ಯಾಥೋಲಿಕ್ ಸಭಾ ಅಧ್ಯಕ್ಷ ವಿಲ್ಸನ್ ಡಿ ಅಲ್ಮೇಡಾ, ನಗರ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತಾ, ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ, ಕಾಂಗ್ರೆಸ್ ಜಿಲ್ಲಾ ಐಟಿ ಸೆಲ್ ಅಧ್ಯಕ್ಷ ರೋಷನ್ ಶೆಟ್ಟಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಎಸ್ವೈಎಸ್ ಸಂಘಟನೆಯ ಕುಂದಾಪುರ ತಾಲೂಕು ಉಪಾಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು, ವಕ್ಫ್ ಸಲಹಾ ಸಮಿತಿ ಜಿಲ್ಲಾ ಅಧ್ಯಕ್ಷ ಅಬ್ದುಲ್ ಮುತಾಲಿ ವಂಡ್ಸೆ, ನಾವುಂದ ಜುಮ್ಮಾ ಮಸೀದಿ ಖತೀಬರಾದ ಅಬ್ದುಲ್ ಲತೀಫ್ ಫಾಲೆಲಿ, ಕುಂದಾಪುರ ಜುಮ್ಮಾ ಮಸೀದಿ ಅಧ್ಯಕ್ಷ ವಸೀಂ ಬಾಷಾ, ಸಾಮಾಜಿಕ ಕಾರ್ಯಕರ್ತ ಮನ್ಸೂರ್ ಮರವಂತೆ ಉಪಸ್ಥಿತರಿದ್ದರು.
ಎಸ್‌ವೈಎಸ್ ರಾಜ್ಯ ಸಮಿತಿಯ ಸದಸ್ಯ ಕೆ.ಎಂ.ಇಲಿಯಾಸ್ ಸ್ವಾಗತಿಸಿದರು. ಎಸ್‌ವೈಎಸ್ ಸಮಿತಿಯ ರಾಜ್ಯಾಧ್ಯಕ್ಷ ಬಶಿರ್ ಸಅದಿ ಬೆಂಗಳೂರು ಪ್ರಾಸ್ತಾವಿಕ ವಾಗಿ ಮಾತನಾಡಿದರು. ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಅಬು ಅಹಮ್ಮದ್ ವಂದಿಸಿದರು.