Category: Udupi

  • ಗಂಗೊಳ್ಳಿ: ಸಮುದ್ರಪಾಲಾಗಿ ಮೂವರು ನಾಪತ್ತೆ ಪ್ರಕರಣ; ಪತ್ತೆಗೆ ಅಗತ್ಯ ಕ್ರಮ ಕೈಗೊಳ್ಳಲು ಉಸ್ತುವಾರಿ ಸಚಿವೆ ಸೂಚನೆ

    ಗಂಗೊಳ್ಳಿ, ಜುಲೈ 15, 2025: ಇಂದು ನಾಡದೋಣಿ ಮಗುಚಿ ನೀರು ಪಾಲಾಗಿರುವ ಮೂವರು ಮೀನುಗಾರರ ಪತ್ತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಘಟನೆ ತಿಳಿದ ತಕ್ಷಣವೇ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದ ಸಚಿವೆ, ಮೀನುಗಾರರ ಪತ್ತೆಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ಮೂವರನ್ನು ಸುರಕ್ಷಿತವಾಗಿ ಕರೆತರಲು ಕಾರ್ಯಾಚರಣೆ ನಡೆಸುವಂತೆ ಕರಾವಳಿ ಕಾವಲು ಪಡೆಗೆ ಸೂಚನೆ ನೀಡಿದ್ದಾರೆ.

    ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ವಹಿಸಬೇಕು. ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸಚಿವೆ ಹೆಬ್ಬಾಳ್ಕರ್ ಸೂಚನೆ ನೀಡಿದ್ದಾರೆ.

    ಇಂದು ಬೆಳಗ್ಗೆ ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಅಲೆಗಳ ಅಬ್ಬರಕ್ಕೆ ಸಿಲುಕಿ ಮಗುಚಿಬಿದ್ದ ಪರಿಣಾಮ ಮೂವರು ಮೀನುಗಾರರು ನಾಪತ್ತೆಯಾಗಿದ್ದಾರೆ.

    ಲಕ್ಷ್ಮೀ ಹೆಬ್ಬಾಳಕರ್

    ಉಡುಪಿಯ ಬೈಂದೂರಿನ ಗಂಗೊಳ್ಳಿಯಲ್ಲಿ ಮೀನುಗಾರಿಕೆಯ ದೋಣಿ ಮುಗುಚಿ ಮೂವರು ಮೀನುಗಾರರು ನೀರಿನಲ್ಲಿ ನಾಪತ್ತೆಯಾಗಿರುವ ಸುದ್ದಿ ತಿಳಿದು ಸಂಕಟವಾಯಿತು. ಆದಷ್ಟು ಬೇಗ ಮೀನುಗಾರರು ಸುರಕ್ಷಿತವಾಗಿ ಹಾಗೂ ಜೀವಂತವಾಗಿ ಮರಳಿ ಬರಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

    ನಾಪತ್ತೆಯಾದವರ ಪತ್ತೆಗೆ ಚುರುಕಾಗಿ ಕಾರ್ಯಾಚರಣೆ ನಡೆಸುವಂತೆ ಕರಾವಳಿ ಕಾವಲು ಪಡೆಗೆ ಮತ್ತು ಜಿಲ್ಲಾಡಳಿತಕ್ಕೆ ಈಗಾಗಲೇ ಸೂಚನೆ ನೀಡಲಾಗಿದೆ. – ಲಕ್ಷ್ಮೀ ಹೆಬ್ಬಾಳಕರ್

    ಗಂಗೊಳ್ಳಿ ಸೀವಾಕ್ ಬಳಿ ಈ ದುರ್ಘಟನೆ ನಡೆದಿದ್ದು, ಓರ್ವ ಮೀನುಗಾರನನ್ನು ರಕ್ಷಿಸಲಾಗಿದೆ.

    ಸುರೇಶ್ ಖಾರ್ವಿ, ಜಗನ್ನಾಥ್ ಖಾರ್ವಿ ಮತ್ತು ರೋಹಿತ್ ಖಾರ್ವಿ ನಾಪತ್ತೆಯಾದ ಮೀನುಗಾರರು. ಸಂತೋಷ್ ಖಾರ್ವಿ ಎನ್ನುವವರನ್ನು ಬೇರೊಂದು ಬೋಟ್ ನವರು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.

    ಸುರೇಶ ಖಾರ್ವಿ ಮಾಲಕತ್ವದ ದೋಣಿಯಲ್ಲಿ ಮಂಗಳವಾರ ಬೆಳಗ್ಗೆ ನಾಲ್ವರು ಮೀನುಗಾರರು ಮೀನುಗಾರಿಕೆ ಹೊರಟಿದ್ದರು. ಈ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿದ ದೋಣಿ ಮಗುಚಿ ಬಿದ್ದಿದೆ. ಈ ವೇಳೆ ಸಂತೋಷ್ ಖಾರ್ವಿ ಈಜಿ ಬೇರೊಂದು ದೋಣಿ ತಲುಪಿದ್ದರೆ, ಉಳಿದ ಮೂವರು ಮೀನುಗಾರರು ಈತನಕ ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ಪೊಲೀಸರು, ಕರಾವಳಿ ಕಾವಲು ಪಡೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

  • ಉಡುಪಿ: ಎಂ.ಜಿ.ಎಂ. ಕಾಲೇಜ್ ಸಮೀಪ ಎಕ್ಸ್‌ಪ್ರೆಸ್ ಬಸ್ಸುಗಳ ನಡುವೆ ಢಿಕ್ಕಿ; ಹಲವರಿಗೆ ಗಾಯ

    ಉಡುಪಿ, ಜುಲೈ 15, 2025: ಉಡುಪಿ-ಮಣಿಪಾಲ ಹೆದ್ದಾರಿಯಲ್ಲಿ ಎಂ.ಜಿ.ಎಂ. ಕಾಲೇಜ್ ಸಮೀಪ ಎರಡು ಎಕ್ಸ್‌ಪ್ರೆಸ್ ಬಸ್ಸುಗಳು ಮುಖಾಮುಖಿ ಢಿಕ್ಕಿಯಾದ ಪರಿಣಾಮ ಹಲವಾರು ಪ್ರಯಾಣಿಕರಿಗೆ ಗಾಯವಾಗಿದೆ.

    ಪ್ರತ್ಯಕ್ಷದರ್ಶಿಗಳ ಪ್ರಕಾರ, ಮಣಿಪಾಲದಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಬಸ್ ಬ್ರೇಕ್ ಕಳೆದುಕೊಂಡು ಎದುರು ದಿಕ್ಕಿನಿಂದ ಬರುತ್ತಿದ್ದ ಮತ್ತೊಂದು ಖಾಸಗಿ ಎಕ್ಸ್‌ಪ್ರೆಸ್ ಬಸ್‌ಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.ಈ ಘರ್ಷಣೆಯಿಂದಾಗಿ ಎರಡೂ ವಾಹನಗಳಿಗೆ ಗಣನೀಯ ಹಾನಿ ಉಂಟಾಗಿದ್ದು, ಹೆದ್ದಾರಿಯ ಎರಡೂ ಬದಿಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ.

    ಘಟನೆಯ ಸ್ಥಳಕ್ಕೆ ಉಡುಪಿ ಟ್ರಾಫಿಕ್ ಪೊಲೀಸರು ಧಾವಂತಾಗಿ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಿದ್ದಾರೆ. ಗಾಯಾಳುಗಳಿಗೆ ಆರೈಕೆ ಒದಗಿಸುವ ಕುರಿತು ಮತ್ತಷ್ಟು ಮಾಹಿತಿ ಇನ್ನಷ್ಟು ತನಿಖೆಯ ನಂತರ ತಿಳಿದುಬರುವ ಸಾಧ್ಯತೆ ಇದೆ.

  • ಕಾರ್ಕಳ ಪರಶುರಾಮ ಮೂರ್ತಿ ಕಂಚಿನದ್ದಲ್ಲ: ತನಿಖೆಯಿಂದ ಸಾಬೀತು

    ಉಡುಪಿ, ಜುಲೈ 14, 2025: ಕಾರ್ಕಳ ತಾಲೂಕಿನ ಉಮ್ಮಿಕಲ್ ಬೆಟ್ಟದ ಪರಶು ರಾಮ್ ಥೀಮ್ ಪಾರ್ಕ್‌ನಲ್ಲಿ ಶಿಲ್ಪಿಕೃಷ್ಣ ನಾಯ್ಕ ಹಿತ್ತಾಳೆಯಿಂದ ಪರಶು ರಾಮ ಮೂರ್ತಿ ನಿರ್ಮಿಸಿರುವುದೇ ಹೊರತು ಕಂಚಿನಿಂದ ಅಲ್ಲ ಎಂಬುದು ತಜ್ಞರ ಪರಿಶೀಲನಾ ವರದಿ ಹಾಗೂ ತನಿಖೆಯಿಂದ ಸಾಬೀತಾಗಿದೆ.

    ಶಿಲ್ಪಿ ಕೃಷ್ಣ ನಾಯಕ್ ಕ್ರಿಶ್ ಆರ್ಟ್ ವರ್ಲ್ಡ್ ಎಂಬ ಸಂಸ್ಥೆಯ ಮೂಲಕ ಪರಶುರಾಮ್ ಥೀಮ್ ಪಾರ್ಕ್‌ನಲ್ಲಿ ಕಂಚಿನ ಪರಶುರಾಮ್ ಮೂರ್ತಿಯನ್ನು ಸ್ಥಾಪಿಸಲು ಉಡುಪಿ ನಿರ್ಮಿತಿ ಕೇಂದ್ರದಿಂದ ಹಣ ಪಡೆದು ಕೊಂಡು ಕಾಮಗಾರಿ ನಡೆಸುತ್ತಿದ್ದು, ನಂತರ ಕೃಷ್ಣ ನಾಯ್ಕ ಕಂಚಿನ ಮೂರ್ತಿಯನ್ನು ಮಾಡದೇ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿ ಸರಕಾರಕ್ಕೆ ವಂಚನೆ ಮಾಡಿರುವುದಾಗಿ 2024ರ ಜೂ.21ರಂದು ಕಾರ್ಕಳದ ಕೃಷ್ಣ ಶೆಟ್ಟಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಈ ಬಗ್ಗೆ ತನಿಖೆ ನಡೆಸಿದ್ದು, ಶಿಲ್ಪಿಕೃಷ್ಣ ನಾಯ್ಕ ಕಂಚಿನ ಲೋಹದಿಂದ ಪರಶುರಾಮ ಮೂರ್ತಿಯ ಬದಲು ಹಿತ್ತಾಳೆ ಲೋಹದಿಂದ ನಿರ್ಮಾಣ ಮಾಡಿರುವುದು ತಜ್ಞರ ಪರಿಶೀಲನಾ ವರದಿ ಹಾಗೂ ತನಿಖೆಯಿಂದ ಸಾಬೀತಾಗಿದೆ. ಅದೇ ರೀತಿ ಉಡುಪಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಹಾಗೂ ಇಂಜಿನಿಯರ್ ಸಚಿನ್ ವೈ.ಕುಮಾರ್ ವರ್ಕ್ ಆರ್ಡರ್‌ನಲ್ಲಿದ್ದ ಷರತ್ತುಗಳನ್ನು ಪಾಲಿಸದೆ, 2023ರ ಅ.12ರಂದು ಪರಶುರಾಮ ಮೂರ್ತಿಯ ಸೊಂಟದಿಂದ ಮೇಲ್ಭಾಗವನ್ನು ಉಮ್ಮಿಕಲ್ ಬೆಟ್ಟದಿಂದ ತೆಗೆದುಕೊಂಡು ಹೋಗಿ ಅಲೆವೂರು ಗ್ರಾಮದ ಪ್ರಗತಿ ನಗರ ಎಂಬಲ್ಲಿರುವ ನಿರ್ಮಿತಿ ಕೇಂದ್ರಕ್ಕೆ ಸಂಬಂಧಿಸಿರುವ ಶೆಡ್‌ನಲ್ಲಿ 2024ರ ಫೆ.25ರ ತನಕ ಇರಿಸಿಕೊಂಡಿದ್ದರು.

    ಆದರೆ ಮೂರ್ತಿಯ ಸೊಂಟದಿಂದ ಮೇಲ್ಭಾಗವನ್ನು ಶಿಲ್ಪಿ ಕೃಷ್ಣ ನಾಯ್ಕಗೆ ಹಸ್ತಾಂತರ ಮಾಡಿದ್ದು, ಆತ ಅದನ್ನು ಬೆಂಗಳೂರಿಗೆ ಸಾಗಾಟ ಮಾಡಿರುವುದಾಗಿ ಅರುಣ್ ಕುಮಾರ್ ತಪ್ಪು ಮಾಹಿತಿಯನ್ನು ನೀಡಿದ್ದಾರೆ. ಈ ಮೂಲಕ ಆರೋಪಿಗಳಾದ ಶಿಲ್ಪಿ ಕೃಷ್ಣ ನಾಯ್ಕ ಉಡುಪಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಹಾಗೂ ಇಂಜಿನಿಯರ್ ಸಚಿನ್ ವೈ.ಕುಮಾರ್ ಅಪರಾಧಿಕ ಒಳಸಂಚು ಮತ್ತು ನಂಬಿಕೆ ದ್ರೋಹ ಮತ್ತು ವಂಚನೆ ಎಸಗಿ, ಸಾಕ್ಷಿ ನಾಶ ಮಾಡಿರುವುದು ಕಂಡುಬಂದಿದೆ. ಅವರ ವಿರುದ್ಧ ಕಲಂ. 420, 409, 201, 120 (ಬಿ) ಜೊತೆಗೆ 34 ಐಪಿಸಿ ಯಂತೆ 1231 ಪುಟಗಳ ದೋಷಾರೋಪಣಾ ಪಟ್ಟಿಯನ್ನು ತಯಾರಿಸಿ ಪೊಲೀಸರು ಕಾರ್ಕಳದ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

  • ಮನೋರೋಗಿ ಸಹಜ ಸ್ಥಿತಿಯತ್ತ; ಹನ್ನೆರಡು ವರ್ಷಗಳ ಬಳಿಕ ಯುವಕ ಕುಟುಂಬಕ್ಕೆ

    ಉಡುಪಿ ಜು.13 ಕಳೆದ ಕೆಲವು ದಿನಗಳ ಹಿಂದೆ ಮಿತ್ರ ಆಸ್ಪತ್ರೆ ಬಳಿ ಸಾರ್ವಜನಿಕರ ಮನೆಗಳಿಗೆ ಬೆಳಗಿನ ಜಾವ ಆಗಮಿಸಿ ಭಯದ ವಾತಾವರಣ ಸೃಷ್ಟಿಸಿದ್ದ ಅಪರಿಚಿತ ಮಾನಸಿಕ ಯುವಕನನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ , ಬಾಳಿಗ ಆಸ್ಪತ್ರೆಗೆ ದಾಖಲಿಸಿದ್ದು ಇದೀಗ ಯುವಕನ ಕುಟುಂಬ ಪತ್ತೆಯಾಗಿದ್ದು ಹಸ್ತಾಂತರಿಸಲಾಗಿದೆ.

    12 ವರ್ಷದ ಹಿಂದೆಯೇ ಮನೆ ಬಿಟ್ಟು ಹೋದ ನವಲಗುಂದ ಮೂಲದ ಸುಧಾಕರ ಪವಾರ್ (33) ರಕ್ಷಿಸಲ್ಪಟ್ಟ ಮಾನಸಿಕ ಯುವಕ. ಇದೀಗ ಕುಟುಂಬಕ್ಕೆ ಮಾಹಿತಿ ಲಭಿಸಿದ್ದು ಸಹೋದರ ಶ್ರೀನಿವಾಸ್ ಉಡುಪಿಗೆ ಬಂದಿದ್ದಾರೆ. ಬಾಳಿಗಾ ಆಸ್ಪತ್ರೆಯಲ್ಲಿ ವೈದ್ಯರು ರೋಗಿಯ ಬಗ್ಗೆ ಮಾಹಿತಿ ಹಾಗೂ ಮುಂದಿನ ಚಿಕಿತ್ಸೆಯ ಬಗ್ಗೆ ಸಹೋದರನಿಗೆ ತಿಳಿಸಿದ್ದಾರೆ. ಚಿಕಿತ್ಸೆಗೆ ಯುವಕ ಸ್ಪಂದಿಸಿದ್ದು ಸಹಜ ಸ್ಥಿತಿಗೆ ಬಂದಿದ್ದಾನೆ.

    ಸುಧಾಕರ್ ಪವಾರ್ ನನ್ನು ಸಹೋದರನ ವಶಕ್ಕೆ ನೀಡುವಾಗ 12 ವರ್ಷಗಳೇ ಕಳೆದು ಹೋಗಿದೆ ಈತ ಮನೆ ತೊರೆದು ಮನೆಗೆ ಕರೆದುಕೊಂಡು ಹೋಗುತ್ತೇನೆ, ಸಹಕರಿಸಿದ ವಿಶು ಶೆಟ್ಟಿ ಹಾಗೂ ಚಿಕಿತ್ಸೆ ನೀಡಿದ ಆಸ್ಪತ್ರೆಯ ವೈದ್ಯಾಧಿಕಾರಿಗೆ ಧನ್ಯವಾದ ತಿಳಿಸಿದ್ದಾರೆ.

    ತೀರಾ ಬಡತನದ ಕುಟುಂಬದವರಾದ ಇವರು ಆಸ್ಪತ್ರೆಯ ಚಿಕಿತ್ಸಾ ವೆಚ್ಚ ರೂ.15,500/- ಭರಿಸಲು ಅಸಹಾಯಕತೆ ತೋರಿಸಿದಾಗ ಚಿಕಿತ್ಸಾ ವೆಚ್ಚವನ್ನು ವಿಶು ಶೆಟ್ಟಿಯವರು ಭರಿಸಿ ಸಹಕರಿಸಿದರು.

  • ಉಡುಪಿ: ನಗರದಲ್ಲಿ ಸರ್ವಧರ್ಮೀಯರಿಂದ ’ಸೌಹಾರ್ದ ಸಂಚಾರ’; ಐಕ್ಯತೆಯ ಸಂದೇಶ

    ಉಡುಪಿ, ಜುಲೈ 14, 2025: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು ‘ಹೃದಯ ಹೃದಯಗಳನ್ನು ಬೆಸೆಯೋಣ’ ಎಂಬ ಧ್ಯೇಯವಾಕ್ಯದೊಂದಿಗೆ ‘ಸೌಹಾರ್ದ ಸಂಚಾರ’ ಕಾರ್ಯಕ್ರಮವನ್ನು ಸೋಮವಾರ ಉಡುಪಿ ನಗರದಲ್ಲಿ ಆಯೋಜಿಸಿತು. ಈ ಕಾರ್ಯಕ್ರಮ ಉಡುಪಿ ಜಾಮೀಯ ಮಸೀದಿಯಿಂದ ಆರಂಭಗೊಂಡು, ನಗರದ ಪ್ರಮುಖ ರಸ್ತೆಗಳ ಮೂಲಕ ಸಾಗಿ ಉಡುಪಿ ಶೋಕಾ ಮಾತಾ ಇಗರ್ಜಿಯಲ್ಲಿ ಸಮಾಪ್ತಿಗೊಂಡಿತು.

    ನಂತರ ನಡೆದ ಸಭೆಯಲ್ಲಿ ಮಾತನಾಡಿದ ಹೋರಾಟಗಾರ ಕಲ್ಕುಳಿ ವಿಠಲ್ ಹೆಗ್ಡೆ, “ನಮ್ಮ ಧರ್ಮ, ನಂಬಿಕೆಗಳು ಖಾಸಗಿಯೇ ಹೊರತು ಸಾರ್ವಜನಿಕ ಅಲ್ಲ. ಆದರೆ ಇತ್ತೀಚಿಗೆ ಕೆಲವರು ಧರ್ಮವನ್ನು ಆಧಾರವಾಗಿ ಇರಿಸಿ ಅಮಾಯಕರ ಮೇಲೆ ದಾಳಿ ಮಾಡಿ ಕೊಲೆ ಮಾಡುವ ಘಟನೆಗಳು ಈ ಜಿಲ್ಲೆಯಲ್ಲಿ ನಡೆಯುತ್ತಿವೆ. ಈ ನಾಡಿನ ಸಾವಿರಾರು ವರ್ಷಗಳಿಂದ ಎಲ್ಲ ಜಾತಿ ಧರ್ಮದವರು ಸೌಹಾದರ್ತೆಯಿಂದ ಬಾಳಿ ಬದುಕುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರ ಪ್ರಚೋದನೆಗೆ ಜನ ಬಲಿಯಾಗುತ್ತಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.

    “ಇಂದು ಜೈಲುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಳಿದ ಜಾತಿಯ ಯುವಕರು ಇದ್ದಾರೆ. ದುಡಿದು ತಿನ್ನಬೇಕಾದ ಮಕ್ಕಳು ತಂದೆತಾಯಿಗೆ ಆಸರೆಯಾಗಬೇಕಾದವರು ಜೈಲಿನಲ್ಲಿ ಕೊಳೆಯುತ್ತಿರುವುದು ದುರಂತ. ಈ ದುಷ್ಟ ಶಕ್ತಿಗಳನ್ನು ನಾವೆಲ್ಲ ಸೇರಿ ಸೋಲಿಸಬೇಕು. ಸಮಾನತೆ, ಸಂವಿಧಾನ ಮತ್ತು ಜಾತ್ಯತೀತತೆಯ ವಿರುದ್ಧ ಇರುವ ಸಂಘಟನೆಗಳನ್ನು ಒಗ್ಗಟ್ಟಿನಿಂದ ಎದುರಿಸಬೇಕು” ಎಂದು ಕರೆ ನೀಡಿದರು. ಸಾಮಾಜಿಕ ಹೋರಾಟಗಾರ ಅಮೃತ್ ಶೆಣೈ, ಸೌಹಾರ್ದ ಸಂಚಾರ ಸಮಿತಿಯ ಅಧ್ಯಕ್ಷ ಹಂಝತ್ ಹೆಜಮಾಡಿ, ಬೈಂದೂರು ಜೋಗಿಮನೆಯ ಶ್ರೀವಸಂತನಾಥ ಗುರುಜೀ, ಮತ್ತು ಚರ್ಚ್‌ನ ಸಹಾಯಕ ಧರ್ಮಗುರು ರೆ.ಫಾ. ಲಿಯೋ ಪ್ರವೀಣ್ ಡಿಸೋಜಾ ಸಹ ಐಕ್ಯತೆಯ ಸಂದೇಶ ನೀಡಿದರು.

    ಈ ಕಾರ್ಯಕ್ರಮದಲ್ಲಿ ಧರ್ಮಗುರು ಫಾದರ್ ವಿಲಿಯಂ ಮಾರ್ಟಿಸ್, ಎಸ್‌ವೈಎಸ್ ಸಮಿತಿಯ ರಾಜ್ಯಾಧ್ಯಕ್ಷ ಬಶಿರ್ ಸಅದಿ (ಬೆಂಗಳೂರು), ಪ್ರಧಾನ ಕಾರ್ಯದರ್ಶಿ ಮೌಲಾನ ಅಬೂಬಕರ್ ಸಿದ್ದೀಕ್ (ಮೊಂಟಗೊಳಿ), ನ್ಯಾಯವಾದಿ ಹಬೀಬ್, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ವೌಲಾ, ಮತ್ತು ಪ್ರಮುಖರಾದ ಎಂ.ಎ.ಗಫೂರ್, ಡಾ.ಗಣನಾಥ ಎಕ್ಕಾರು, ಪ್ರಶಾಂತ್ ಜತ್ತನ್ನ, ರಮೇಶ್ ಕಾಂಚನ್, ಸುಂದರ್ ಮಾಸ್ಟರ್, ಶ್ಯಾಮರಾಜ್ ಬಿರ್ತಿ, ನಾಗೇಶ್ ಉದ್ಯಾವರ, ಪ್ರಭಾಕರ ಪೂಜಾರಿ, ವಹೀದ್ ಶೇಖ್ (ಉದ್ಯಾವರ), ಸುಭಾನ್ ಹೊನ್ನಾಳ, ಇಸ್ಮಾಯಿಲ್ ಹುಸೇನ್ (ಕಟಪಾಡಿ), ಹನೀಫ್ ಹಾಜಿ (ಅಂಬಾಗಿಲು), ತೌಫಿಕ್ ಹಾಜಿ ಸೇರಿದಂತೆ ಇತರರು ಭಾಗವಹಿಸಿದ್ದರು. ಎಸ್‌ವೈಎಸ್ ರಾಜ್ಯ ಸಂಯೋಜಕ ಅಬ್ದುರ್ರಹ್ಮಾನ್ ರಝ್ವಿ (ಕಲ್ಕಟ್ಟ) ಕಾರ್ಯಕ್ರಮವನ್ನು ನಿರೂಪಿಸಿದರು.

  • ರಾಜ್ಯದಲ್ಲಿ ಜುಲೈ 19 ರವರೆಗೆ ಭಾರೀ ಮಳೆ: ಕರಾವಳಿ ಜಿಲ್ಲೆಗೆ ಯೆಲ್ಲೋ ಅಲರ್ಟ್

    ಬೆಂಗಳೂರು: ಕರಾವಳಿ ಸೇರಿದಂತೆ ರಾಜ್ಯದ ವಿವಿಧೆಡೆ ಜುಲೈ 19ರವರೆಗೆ ವ್ಯಾಪಕ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಕರಾವಳಿ ಜಿಲ್ಲೆಗಳಲ್ಲಿ ಜುಲೈ 19ರ ವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆಗಳಿದ್ದು, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಜು.19ರವರೆಗೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಜುಲೈ 19ರವರೆಗೆ ಹಲವು ಕಡೆ ಹೆಚ್ಚಿನ ಮಳೆಯಾಗುವ ಸಾದ್ಯತೆ ಇದ್ದು, ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ.

    ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಜುಲೈ 14,15ರಂದು ಯೆಲ್ಲೋ ಅಲರ್ಟ್‌ ಹಾಗೂ ಜುಲೈ 16 ರಿಂದ 19ರವರೆಗೆ ಆರೆಂಜ್‌ ಅಲರ್ಟ್‌ ಘೋಷನೆ ಮಾಡಲಾಗಿದೆ. ಉತ್ತರ ಕನ್ನಡದ ಮಂಕಿ 7, ಶಿವಮೊಗ್ಗದ ಆಗುಂಬೆಯಲ್ಲಿ 5, ಕೊಪ್ಪಳದ ಮುನಿರಾಬಾದ್‌ ನಲ್ಲಿ 3 ಸೆಂ.ಮೀ ಮಳೆಯಾಗಿದೆ.‌

  • ಉಡುಪಿ: ಆರೈಕೆದಾರನಿಂದ ಹಣ ಮೋಸ; ಪ್ರಕರಣ ದಾಖಲು

    ಉಡುಪಿ, ಜುಲೈ 14, 2025: ಉಡುಪಿಯ ಅಂಬಲ್ಪಾಡಿಯ ನಿವಾಸಿ ಕಾರ್ತಿಕ್ (33) ಅವರ ತಂದೆ ವಸಂತರಾಜ್ ಅವರ ಆರೋಗ್ಯ ಚಿಕಿತ್ಸೆಗಾಗಿ 2024ರ ನವೆಂಬರ್‌ ತಿಂಗಳಿಂದ 2025ರ ಮಾರ್ಚ್‌ವರೆಗೆ ಮೇಲ್ ನರ್ಸ್ ವಿನೋದ್ ಎಂಬವರನ್ನು ನೇಮಕ ಮಾಡಲಾಗಿತ್ತು. ದಿನಾಂಕ 27/02/2025ರಂದು ವಸಂತರಾಜ್ ಅವರನ್ನು ಎಸ್‌ಡಿಎಂ ಉದ್ಯಾವರ್‌ನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಆರೈಕೆಗಾಗಿ ವಿನೋದ್ ಅವರನ್ನು ನೇಮಿಸಲಾಗಿತ್ತು.

    ಆರೈಕೆಯ ಸಂದರ್ಭದಲ್ಲಿ ವಿನೋದ್ ಅವರು ಕಾರ್ತಿಕ್ ಅವರ ತಂದೆಯ ಗಮನಕ್ಕೆ ತಪ್ಪಿಸಿಕೊಂಡು, ಫೋನ್-ಪೇ ಮೂಲಕ ಒಟ್ಟು ₹68,500/-ನ್ನು ಅವರ ಬ್ಯಾಂಕ್ ಖಾತೆಯಿಂದ ವರ್ಗಾವಣೆ ಮಾಡಿದ್ದಾನೆ. ಇದರ ಬಗ್ಗೆ ವಿನೋದ್‌ರನ್ನು ವಿಚಾರಿಸಿದಾಗ, ಅವರು ಹಣ ತೆಗೆದುಕೊಂಡಿದ್ದನ್ನು ಒಪ್ಪಿಕೊಂಡಿದ್ದು, ₹12,000/-ನ್ನು ಮಾತ್ರ ಹಿಂತಿರುಗಿಸಿದ್ದಾರೆ. ಉಳಿದ ₹56,500/- ರೂಪಾಯಿಯನ್ನು ಕೊಡದೆ ಮೋಸ ಮಾಡಿರುವ ಆರೋಪದಡಿ, ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 129/2025ರಡಿ, ಕಲಂ 316(2), 318(4) BNS ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

  • ಉಡುಪಿ: ‘ಕೈಯಲ್ಲಿ ಮಣ್ಣು, ಹೃದಯದಲ್ಲಿ ಭಾರತ’ ಅಭಿಯಾನ; ಚಿಣ್ಣರು ಗಿಡ ನೆಟ್ಟಿ ಸಂಭ್ರಮ

    ಉಡುಪಿ, ಜುಲೈ 13, 2025: ‘ಕೈಯಲ್ಲಿ ಮಣ್ಣು, ಹೃದಯದಲ್ಲಿ ಭಾರತ’ ಎಂಬ ರಾಷ್ಟ್ರೀಯ ಅಭಿಯಾನದ ಅಡಿಯಲ್ಲಿ ಚಿಲ್ಡ್ರನ್ ಇಸ್ಲಾಮಿಕ್ ಆರ್ಗನೈಸೇಶನ್‌ನ (ಸಿಐಓ) ಉಡುಪಿ ಘಟಕವು ಪರಿಸರ ಜಾಗೃತಿ ಮೂಡಿಸುವುದು ಮತ್ತು ಯುವ ಜನಾಂಗದಲ್ಲಿ ಪ್ರಕೃತಿಯ ಜವಾಬ್ದಾರಿಯನ್ನು ಬೆಳೆಸುವ ಉದ್ದೇಶದಿಂದ ರವಿವಾರ ಗಿಡ ನೆಡುವ ಕಾರ್ಯಕ್ರಮವನ್ನು ಆಯೋಜಿಸಿತು.

    ಕಾರ್ಯಕ್ರಮದಲ್ಲಿ ಮೆಹರುನಿಸಾ ಭಾಗವಹಿಸಿ, ಸಸ್ಯಗಳ ಪ್ರಾಮುಖ್ಯತೆ ಮತ್ತು ದೈನಂದಿನ ಜೀವನದಲ್ಲಿ ಅವುಗಳ ಬಹುವಿಧ ಉಪಯೋಗಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು. ನಂತರ, ಸಿಐಓ ಮಕ್ಕಳು, ಐಸಿಸಿ ಹುಡುಗರು ಮತ್ತು ಎಸ್‌ಐಓ ಕಾರ್ಯಕರ್ತರು ಉಡುಪಿಯ ಜಾಮಿಯಾ ಮಸೀದಿ ಆವರಣದಲ್ಲಿ ಸಸಿಗಳನ್ನು ನೆಟ್ಟರು. ಈ ಸಂದರ್ಭದಲ್ಲಿ ಜಾಮಿಯಾ ಮಸೀದಿಯ ರಿಯಾಜ್ ಅಹ್ಮದ್ ಉಪಸ್ಥಿತರಿದ್ದರು.

  • Monsoon Football Splash District Level Tournament Shines in Manipal

    Manipal, July 13, 2025: The Students Islamic Organisation (SIO) Udupi District hosted the exhilarating Monsoon Football Splash District Level Tournament on July 13, 2025, at City Arena, Manipal. Building on the success of the Brotherhood Football Match held on July 6, 2025, this event brought together 11 teams from 4 units and 7 circles, showcasing remarkable talent, teamwork, and sportsmanship.

    The tournament, a vibrant celebration of unity and brotherhood, saw enthusiastic participation from young athletes representing circles including Gangolli, Kandlur, Mavinakatte, Shiroor, Uppinakote, Brahmavar, and others. The matches were filled with energy, with players demonstrating their passion for football amidst the monsoon spirit.

    Tournament Highlights

    • Winners: Shiroor
    • Runners-up: Gangolli

    The event fostered a sense of community and healthy competition among the youth, aligning with SIO’s mission to promote unity through sports. The tournament was a testament to the dedication and skill of the participants, who competed with fervor and camaraderie.

    SIO Udupi District extends heartfelt gratitude to all participating units and circles for their spirited involvement and contribution to making the event a grand success.

    Source: SIO Udupi District

  • ಉಡುಪಿ: ಹಣ್ಣು ಹಂಪಲಿನ ಗಿಡಗಳ ಉಚಿತ ವಿತರಣೆ ಕಾರ್ಯಕ್ರಮ

    ಉಡುಪಿ, ಜುಲೈ 12, 2025: ಪ್ರಿ ಓನ್ಡ್‌ ವೆಹಿಕಲ್‌ ಅಸೋಸಿಯೇಷನ್‌ ಉಡುಪಿ ಇದರ ವತಿಯಿಂದ ಒಂದು ಸಾವಿರಕ್ಕೂ ಮಿಕ್ಕಿ ಹಣ್ಣು ಹಂಪಲಿನ ಗಿಡಗಳ ಉಚಿತ ವಿತರಣೆ ಮತ್ತು ನೆಡುವ ಕಾರ್ಯಕ್ರಮ ಶನಿವಾರ ಉಡುಪಿ ಭುಜಂಗ ಪಾರ್ಕ್‌ ನ ಬಯಲು ರಂಗಮಂಟಪದಲ್ಲಿ ನಡೆಯಿತು.

    ಕಾರ್ಯಕ್ರಮವನ್ನು ನಗರ ಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಈಗ ಎಲ್ಲಿ ನೋಡಿದರು ಬಿಲ್ಡಿಂಗ್‌ ಗಳು ತಲೆ ಎತ್ತಿ ನಿಂತಿದ್ದು, ಮಳೆ ನೀರು ಇಂಗುವ ಸ್ಥಳಗಳೇ ಇಲ್ಲದೇ ಮಳೆ ನೀರು ಸಮುದ್ರವನ್ನು ಸೇರುತ್ತಿದೆ. ಗಿಡ ನೆಡುವುದರಿಂದ ನೀರಿನ ಜಲಮಟ್ಟವನ್ನು ಏರಿಸಬಹುದು. ನಗರದಲ್ಲಿ ಮರಗಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆ ಇಂದಿನ ದಿನಮಾನದಲ್ಲಿ ಉಷ್ಣತೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ನಗರದ 35 ವಾರ್ಡಿನಲ್ಲಿ ಪಾರ್ಕ್‌ ಗಳ ಸಂಖ್ಯೆ ಹೆಚ್ಚಿಸುವುದು ನಮ್ಮ ಪ್ರಥಮ ಆದ್ಯತೆ ಎಂದರು.

    ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ, ನಿರಂತರವಾಗಿ ಇದನ್ನು ಮುಂದುವರಿಸಿ, ಇದನ್ನು ಇಡೀ ಜಿಲ್ಲೆಗೆ ವಿಸ್ತರಿಸಿ ಎಂದು ಶುಭ ಹಾರೈಸಿದರು.

    ಮುಖ್ಯ ಅತಿಥಿಗಳಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಲ್.ಪಿ.ನಾಯಕ್, ವಲಯ ಅರಣ್ಯಧಿಕಾರಿ ವನಜಾಕ್ಷಿ, ನಗರಸಭಾ ಸದಸ್ಯರಾದ ಮಂಜುನಾಥ್ ಮಣಿಪಾಲ, ರಶ್ಮಿ ಭಟ್, ಡಾ.ಪ್ರಕಾಶ್ ಭಟ್, ಐರೋಡಿ ಅನಂತ ಪೈ. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಅಶ್ರಫ್ ವಹಿಸಿದ್ದರು, ಉದಯ್ ಕಿರಣ್ ಸ್ವಾಗತಿಸಿದರು.